

ಮಂಡ್ಯ: ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಶ್ವೇತವಸಧಾರಿಗಳಾಗಿ ವಿವಿಧ ಬಡಾವಣೆಗಳಿಂದ ಆಗಮಿಸಿದ ಸಹಸ್ರಾರು ಮುಸ್ಲಿಮರ ನಗರದ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಮೈದಾನದ ಆವರಣದ ಬಳಿಯಿದ್ದ ಬಡವರಿಗೆ ದಾನ ಮಾಡಿದರು. ಅಂತೆಯೇ, ಮಕ್ಕಳು ಸಿಹಿ ನೀಡಿ ಹಬ್ಬದ ಸಂಭ್ರಮ ಹಂಚಿಕೊಂಡರು. ಸಮುದಾಯದವರ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಿದ್ದು ಕಂಡುಬಂತು.
ಮುಡಾ ಅಧ್ಯಕ್ಷರಿಂದ ಅನ್ನದಾಸೋಹ: ಬಕ್ರೀದ್ ಹಬ್ಬದ ಅಂಗವಾಗಿ ನಗರದ ಮಿಮ್ಸ್‌ನ ಆವರಣದಲ್ಲಿ ಮಮತೆಯ ಮಡಿಲು ನಿತ್ಯ ದಾಸೋಹ ಕೇಂದ್ರದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ ಸಾರ್ವಜನಿಕರಿಗೆ ಅನ್ನದಾಸೋಹ ವಿತರಿಸಿದರು.
ಬಳಿಕ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಮುಖ್ಯವಾಗಿ ಬಡವರಿಗೆ ಹಸಿವು ಮುಕ್ತ ಕರ್ನಾಟಕ ಎಂಬ ಘೋಷವಾಕ್ಯದೊಡನೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಈ ಮೂಲಕ ಅಪೌಷ್ಠಿಕತೆಯಿಂದ ನರಳುತ್ತಿರುವ ಕುಟುಂಬಗಳು ಸದೃಢ ದೇಹ ಹೊಂದಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಂತೆಕಸಲಗೆರೆ ಬಸವರಾಜು, ಬೆಸ್ತರ ಸಂಘದ ಮಳವಳ್ಳಿ ಘಟಕದ ಅಧ್ಯಕ್ಷ ಶಿವರಾಜು ಇತರರಿದ್ದರು.