ಕರಾವಳಿಯಾದ್ಯಂತ ಸಂಭ್ರಮದ ಬಕ್ರೀದ್ ; ಮುಸ್ಲಿಮರಿಂದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ , ಖುತ್ಬಾ ಪಾರಾಯಣ, ಸೌಹಾರ್ದ ಭೇಟಿ

mng- june 17- bakrid- 1
ಬಕ್ರೀದ್ ಪ್ರಯುಕ್ತ ಮಂಗಳೂರು ಬಾವುಟಗುಡ್ಡೆ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆಯಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಶ್ರದ್ಧಾಳುಗಳು ಭಾಗವಹಿಸಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಈದುಲ್ ಅಝ್‌ಹಾ(ಬಕ್ರೀದ್) ಹಬ್ಬವನ್ನು ಕರಾವಳಿಯಾದ್ಯಂತ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ದಕ್ಷಿಣ ಕನ್ನಡದ ಮುಸ್ಲಿಮರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಜ್ ನಿರ್ವಹಿಸಿ, ಈದ್ ಖುತ್ಬಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡುಬಂತು.
ಮಂಗಳೂರಿನ ಬಾವುಟಗುಡ್ಡೆ, ಉಳ್ಳಾಲ ಕೇಂದ್ರ ಜುಮಾ ಮಸೀದಿ, ಪಂಪ್‌ವೆಲ್‌ನ ಮಸೀದಿ, ಹಂಪನಕಟ್ಟೆಯ ಮಸೀದಿ, ಸ್ಟೇಟ್‌ಬ್ಯಾಂಕ್‌ನ ಇಬ್ರಾಹಿಂ ಖಲೀಲ್ ಮಸೀದಿ, ಕಂಕನಾಡಿ ರಹ್ಮಾನಿಯಾ ಜುಮಾ ಮಸೀದಿ, ನಗರದ ವಾಸ್‌ಲೇನ್ ಇಹ್ಸಾನ್ ಮಸೀದಿ, ಪಾಂಡೇಶ್ವರ ಪೊಲೀಸ್‌ಲೇನ್‌ನ ಫೌಝಿಯಾ ಜುಮಾ ಮಸೀದಿ, ಬಂದರ್ ಕಚ್ಚೀ ಮೇಮನ್ ಜುಮಾ ಮಸೀದಿ, ಬಂದರ್ ಕಂದುಕ ಬದ್ರಿಯಾ ಜುಮಾ ಮಸೀದಿ, ಬೋಳಾರ ಮುಹಿಯುದ್ದೀನ್ ಜುಮಾ ಮಸೀದಿ, ಕುದ್ರೋಳಿ ಜಾಮೀಯಾ ಜುಮಾ ಮಸೀದಿ, ಬಿಕರ್ನಕಟ್ಟೆ ಅಹಸನುಲ್ ಮಸ್ಜಿದ್ ಸಹಿತ ಜಿಲ್ಲೆಯ ಜುಮಾ ಮಸೀದಿ ಮತ್ತು ಈದ್ಗಾಗಳಲ್ಲಿ ನಮಾಜ್ ಹಾಗೂ ಖುತ್ಬಾ ನೆರವೇರಿಸಲಾಯಿತು.
ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿವಿಧ ತಿಂಡಿ-ತಿನಿಸು ತಿಂದು ಹಬ್ಬವನ್ನು ಸಂಭ್ರಮಿಸಿದರು. ಈದ್ ನಮಾಜ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸಿದರು.

(((ಬಾಕ್ಸ್))))

ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ಈದ್ ನಮಾಜ್
ಮಂಗಳೂರಿನ ಈದ್ಗಾ ಪ್ರಾರ್ಥನಾ ಮಂದಿರದಲ್ಲ್ಲಿ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಅವರ ನೇತೃತ್ವದಲ್ಲಿ ಈದ್ ನಮಾಜ್ ಹಾಗೂ ಖುತ್ಬಾ ಪಾರಾಯಣ ನಡೆಯಿತು. ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಪ್ರಾರ್ಥನಾ ಮಂದಿರದ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ, ಪ್ರಧಾನ ಕಾರ್ಯದರ್ಶಿ ಹನೀಫ್ ಬಂದರ್, ಕೋಶಾಧಿಕಾರಿ ಎಸ್.ಎಂ.ರಶೀದ್, ಉಪಾಧ್ಯಕ್ಷ ಕೆ.ಅಶ್ರಫ್, ಈದ್ಗಾ ಪ್ರಾರ್ಥನಾ ಮಂದಿರದ ಖತೀಬ್ ಪಿ.ಎಚ್.ಮುಸ್ತಫಾ ಅಝ್ಹರಿ ಪಾಲ್ಗೊಂಡಿದ್ದರು. ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್‌ನ ಖತೀಬ್ ಅಬ್ದುಲ್ ಅಕ್ರಂ ಬಾಖವಿ ನಮಾಜ್‌ಗೆ ನೇತೃತ್ವ ನೀಡಿದರು. ಸ್ಪೀಕರ್ ಯು.ಟಿ. ಖಾದರ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಭಾಗವಹಿಸಿ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net