

ವಿಜಯಪುರ : ಬಡವ, ಬಲ್ಲಿದ, ಶ್ರೀಮಂತ ಎಂಬ ಭೇದವಿಲ್ಲದೆ ಇರುವುದನ್ನು ಹಂಚಿಕೊಂಡು ಎಲ್ಲರೂ ಸಮಾನತೆಯಿಂದ ಬಾಳಬೇಕೆಂಬುದನ್ನು ತಿಳಿಸುವುದು ಬಕ್ರೀದ್ ಹಬ್ಬದ ಉದ್ದೇಶ ಎಂದು ಜಾಮಿಯಾ ಮಸೀದಿಯ ಮೌಲ್ವಿ ಆಮೀರ್ ತಿಳಿಸಿದರು.
ಚಿಕ್ಕಬಳ್ಳಾಪುರ ರಸ್ತೆಯ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಇಬ್ರಾಹಿಂ ತನ್ನ ಪ್ರೀತಿ ಪಾತ್ರನಾದ ಮಗ ಇಸ್ಮಾಯಿಲ್ನನ್ನು ಅಲ್ಲಾಹಗಾಗಿ ಬಲಿಕೊಡಲು ಸಿದ್ಧನಾದುದೇ ತ್ಯಾಗ ಮತ್ತು ಬಲಿದಾನಕ್ಕೆ ಹೆಸರಾದ ಬಕ್ರೀದ್ ಹಬ್ಬವಾಯಿತು ಎಂದರು.
ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಎಲ್ಲ ಧರ್ಮಗಳ ಬಗ್ಗೆ ಗೌರವ ಭಾವನೆ ಬೆಳೆಸಿಕೊಂಡು ಪರಸ್ಪರ ಸಹೋದರತೆಯಿಂದ ಬಾಳಿದಾಗ ಸಮಾಜದಲ್ಲಿ ಶಾಂತಿ ನೆಲೆಸುವುದು ಎಂದರು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ತಿಳಿಸಿದಂತೆ ಯಾರ ಬಳಿ 52.5 ತೊಲ ಬೆಳ್ಳಿ ಇದೆಯೋ ಅಥವಾ 7.5 ತೊಲ ಬಂಗಾರ ಇದೆಯೋ ಅಥವಾ ಅದರಷ್ಟು ಬೆಲೆಯಷ್ಟು ಹಣ ಇರುತ್ತದೆಯೋ ಅವರು ಕಡ್ಡಾಯವಾಗಿ ಮೂರು ಭಾಗ ಮಾಡಿ ಒಂದು ಭಾಗ ಸ್ವಂತಕ್ಕೆ, ಒಂದು ಭಾಗ ಸಂಬಂಧಿಕರಿಗೆ, ಒಂದು ಭಾಗ ಅಕ್ಕಪಕ್ಕದಲ್ಲಿ ವಾಸಿಸುವ ಬಡವರಿಗೆ ಹಂಚಬೇಕು ಎಂಬುದಾಗಿತ್ತು ಎಂದು ಹಬ್ಬದ ಹಿನ್ನೆಲೆ ಬಗ್ಗೆ ವಿವರಿಸಿದರು.
ರಾಜಕಾರಣಿಗಳ ಸುಳಿವಿಲ್ಲ : ಪ್ರತಿ ಬಾರಿ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು, ಶಾಸಕರು, ಸಚಿವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ವರ್ಷ ಬಕ್ರೀದ್ ಹಬ್ಬದ ಆಚರಣೆಯಲ್ಲಿ ಯಾವುದೇ ಮುಖಂಡರು, ರಾಜಕಾರಣಿಗಳ ಸುಳಿವೇ ಇರಲಿಲ್ಲ.
ಸಂಚಾರ ಅಸ್ತವ್ಯಸ್ತ : ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಈದ್ಗಾ ಮೈದಾನದ ಬಳಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ದಶಕಗಳಿಂದ ಸಲ್ಲಿಸುತ್ತಾರೆ, ದಿನೇದಿನೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಈದ್ಗಾ ಮೈದಾನದ ಜಾಗ ಸಾಲದೆ, ಶಿಡ್ಲಟ್ಟ ಡೀವಿಯೇಷನ್ ರಸ್ತೆಯ ಕೋಲಾರ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ಶಿಡ್ಲಟ್ಟ ರಸ್ತೆಗಳಲ್ಲಿ ಪ್ರಾರ್ಥನೆಗಾಗಿ ಕೂಡುವುದು ಸಾಮಾನ್ಯವಾಗಿದೆ, ಈ ವೃತ್ತದಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಬೇರೆ ರಸ್ತೆಗಳ ಮೂಲಕ ಸಂಚರಿಸಲು ಪೊಲೀಸರು ಪಡಬಾರದ ಕಷ್ಟಪಡಬೇಕಾಗಿದೆ. ಈ ಬಾರಿಯೂ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು. ದೇವನಹಳ್ಳಿ ರಸ್ತೆಯ ವಿಶಾಲವಾದ ಜಂಗ್ಲಿ ಪಿರ್ ಬಾಬಾ ಮೈದಾನಕ್ಕೆ ಈದ್ಗಾ ಪ್ರಾರ್ಥನಾ ಮಸೀದಿ ಬದಲಾಯಿಸಿದರೆ, ಸಂಚಾರ ಸಮಸ್ಯೆ ತಪ್ಪುತ್ತದೆ ಎಂಬುದು
ಸಾರ್ವಜನಿಕರ ಅಭಿಪ್ರಾಯ.
ಮುಖ್ಯ ಬೀದಿಗಳಲ್ಲಿ ಮೆರವಣಿಗೆ : ಪಟ್ಟಣದ ಎಲ್ಲ ಮುಸ್ಲಿಮರು ಮುಂಜಾನೆಯೇ ಎದ್ದು, ನೂತನ ವಸಗಳನ್ನು ಧರಿಸಿ, ಪಟ್ಟಣದಲ್ಲಿನ ಮಸೀದಿಗೆ ತೆರಳಿದರು. ಖುಬಾ, ಆಕ್ಸಾ, ನೂರಾನಿ, ಮಹಮ್ಮದಿಯ, ಮದೀನಾ, ಸಭಾ ಮುಂತಾದ ಎಲ್ಲ ಮಸೀದಿಗಳಿಂದ ಹೊರಟ ಸಮುದಾಯದ ಜನತೆ ಜಾಮೀಯಾ ಮಸೀದಿ ಬಳಿ ಜಮಾವಣೆಗೊಂಡರು. ಅಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ಧರ್ಮ ಲಾಂಛನಗಳೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಅಲ್ಲಾಹ್ನ ಸ್ಮರಣೆ ಮಾಡುತ್ತಾ, ಮೆರವಣಿಗೆಯೊಂದಿಗೆ ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಈದ್ಗಾ ಮೈದಾನದ ಬಳಿ ತಲುಪಿದರು. ಪ್ರಾಥಧನೆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.