

ಕೆ.ಆರ್.ಸಾಗರ: ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ತೇಜಸ್ ಬೇಕರಿ ಮಾಲೀಕನನ್ನು ಹಾಡಹಗಲೇ ಲಾಂಗ್‌ನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೆ.ಆರ್.ಸಾಗರದ ಬೇಕರಿ ಮಾಲೀಕ, ಕೆ.ಆರ್.ನಗರ ತಾಲೂಕು ಬಸವರಾಜಪುರ ನಿವಾಸಿ ಚೇತನ್ ಕೊಲೆಯಾದವರು. ಚೇತನ್ ಹಲವು ವರ್ಷಗಳಿಂದ ಕೆ.ಆರ್.ಸಾಗರಲ್ಲಿ ಬೇಕರಿ ನಡೆಸುತ್ತಿದ್ದರು. ಗುರುವಾರ ಸಂಜೆ 4.40ರ ಸುಮಾರಿನಲ್ಲಿ ಬೇಕರಿಗೆ ನಡೆದು ಬರುತ್ತಿದ್ದ ಚೇತನ್‌ಗೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಲಾಂಗ್‌ನಿಂದ ತಲೆ, ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಮನಸೋಇಚ್ಛೆ ಥಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಸ್ಥಳೀಯರು ಚೇತನ್‌ನನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕೊಲೆ ಮಾಡಿದ ದುಷ್ಕರ್ಮಿಗಳೂ ಬೇಕರಿಗೂ ಬಂದು ನೌಕರರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೊಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದುಷ್ಕರ್ಮಿಗಳು ಕೆ.ಆರ್.ಸಾಗರದ ಸಂತೋಷ್, ನಾಗೇಶ್, ಮನೋಜ್ ಎಂದು ಪೊಲೀಸರು ತಿಳಿಸಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಕೆ.ಆರ್.ಸಾಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ.