

ಹಾನಗಲ್ಲ: ಪುರಸಭೆ ವ್ಯಾಪ್ತಿಯ ಹಲವೆಡೆ ಪೂರ್ವಾನುಮತಿ ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ವಿುಸಲಾಗಿದೆ. ಅಂಥ ಕೆಲವು ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ತಾಂತ್ರಿಕ ದೋಷದ ಕಾರಣಗಳಿಂದ ತಾಲೂಕಿನಲ್ಲಿ ಪ್ರಮುಖ ನೀರಾವರಿ ಯೋಜನೆಗಳಿಗೆ ಗ್ರಹಣ ಹಿಡಿದಂತಾಗಿದೆ. ಇದರಿಂದ ಕೆರೆ, ಕಟ್ಟೆಗಳಿಗೆ, ಕೃಷಿ ಭೂಮಿಗೆ ನೀರು ಹರಿಸುವುದು ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳ ಪ್ರಾಯೋಗಿಕ ಪರೀಕ್ಷೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಹಾನಗಲ್ಲಿನಲ್ಲಿ ಹಾಯ್ದು ಹೋಗಿರುವ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಪ್ರಯಾಸ ಅನುಭವಿಸುವಂತಾಗಿದೆ. ರಸ್ತೆ ಸುಧಾರಣೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಕೆ. ನಾಗರಾಜ ಅವರಿಗೆ ಸೂಚಿಸಿದರು.
ಹೊಂಕಣ, ಮಾರನಬೀಡ ಸೇರಿದಂತೆ ತಾಲೂಕಿನ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಕ್ರಮ ಮದ್ಯದ ಮಾರಾಟ ಮಿತಿ ಮೀರಿದೆ. ಮಹಿಳಾ ಸಂಘಟನೆಗಳ ಸಹಕಾರ ಪಡೆದು, ಅಕ್ರಮ ಮದ್ಯದ ಮಾರಾಟಕ್ಕೆ ಬ್ರೇಕ್ ಹಾಕಬೇಕು. ದಿಢೀರ್ ದಾಳಿ ಮಾಡಿ ಕ್ರಮ ಜರುಗಿಸಿ ಎಂದು ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ಸವಿತಾ ಆರ್.ಟಿ. ಅವರಿಗೆ ಶಾಸಕ ಮಾನೆ ಸೂಚಿಸಿದರು.
ಈಗಾಗಲೇ ವಿದ್ಯುತ್ ಅಭಾವ ತಲೆದೋರಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ವಿದ್ಯುತ್ ಉಳಿತಾಯದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿ, ಪೋಲಾಗುವುದನ್ನು ತಡೆಗಟ್ಟಿರಿ. ತಾಲೂಕಿನಲ್ಲಿ ಕನಿಷ್ಠ ನೂರು ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪ ಉರಿಯುತ್ತಿದ್ದು, ಇದಕ್ಕೆಲ್ಲ ಕಡಿವಾಣ ಹಾಕಿ ಎಂದು ಹೆಸ್ಕಾಂ ಎಇಇ ಆನಂದ ಅವರಿಗೆ ಸೂಚನೆ ನೀಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ಹಲವರು ಯೋಜನೆಯ ಪ್ರಯೋಜನದಿಂದ ವಂಚಿತರಾಗುವಂತಾಗಿದೆ. ಕಾಳಜಿ ವಹಿಸಿ ಅರ್ಹರಿಗೆ ಯೋಜನೆಗಳ ಲಾಭ ದೊರಕಿಸಬೇಕು ಎಂದು ಸಿಡಿಪಿಒ ರಂಗನಾಥ ಅವರಿಗೆ ಶ್ರೀನಿವಾಸ ಮಾನೆ ಸೂಚಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.