

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯಕ್ರಮದ ಆರಂಭಿಸುತ್ತಿರುವುದು ಸಂತಸ ಹಾಗೂ ಪವಿತ್ರವಾಗಿದೆ. ಆದರೆ ಈ ಯೋಜನೆಗೆ ಕೆಲವರು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಬಜರಂಗಸೇನೆ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಆಕ್ಷೇಪಿಸಿದರು. ಕಾವೇರಿ ಆರತಿಯನ್ನು ಧಾರ್ಮಿಕ ಆಚರಣೆಯಾಗಿ ಕಾವೇರಿ ಮಾತೆಗೆ ಕೃತಜ್ಞೆಗೆ ಅರ್ಪಿಸುವ ದೃಷ್ಠಿಯಿಂದ ಸಂತೋಷದಿಂದ ಸ್ವಾಗತಿಸಿ ಸಂಭ್ರಮಿಸಬೇಕು. ಕಾಶಿಯಲ್ಲಿ ನಡೆಯುವ ಗಂಗಾರತಿ ಕಾರ್ಯಕ್ರಮದಿಂದ ಉತ್ತರ ಪ್ರದೇಶ ಸರ್ಕಾರಕ್ಕೆ ವಾರ್ಷಿಕ 200 ಕೋಟಿ ರೂ ಆದಾಯ ಬರುತ್ತದೆ. ಹಾಗೆಯೇ ನಮ್ಮ ಶ್ರೀರಂಗಪಟ್ಟಣಕ್ಕೂ ರಾಜ್ಯದ ಕೋಟ್ಯಂತರ ಜನರು ಬರುವುದರಿಂದ ಸಹಜವಾಗಿಯೇ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗಲಿದ್ದು, ಸರ್ಕಾರಕ್ಕೂ ಆದಾಯ ಬರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾವೇರಿ ಮಾತೆಯ ಬಗ್ಗೆ ನಮ್ಮೆಲ್ಲರಿಗೂ ಪೂಜ್ಯನೀಯ ಭಾವನೆಯಿದೆ. ಕಾವೇರಿ ತಾಯಿಯನ್ನು ಸ್ಮರಿಸುವುದು, ಆರಾಧಿಸುವುದು ಮತ್ತು ಪೂಜಿಸುವುದು ನಮ್ಮೆ ಹೊಣೆ. ಕಾವೇರಿಯನ್ನು ಪೂಜಿಸಿದರೆ, ಆರತಿ ಬೆಳಗಿದರೆ ತಪ್ಪನು? ಕಾವೇರಿ ಆರತಿ ಕಾರ‌್ಯಕ್ರಮಕ್ಕೆ ವಿರೋಧವೇಕೆ?. ಯಾವುದೇ ಹಿಂದು ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ಆಚರಣೆಗಳೆಂದರೆ ಅದನ್ನು ವಿರೋಧಿಸಲು ಹಿಂದುತ್ವದ ವಿರೋಧಿಗಳು ಸಕ್ರಿಯರಾಗುತ್ತಾರೆ. ಕೆಲವರಿಗೆ ಹಿಂದು ಧಾರ್ಮಿಕ ಆಚರಣೆಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗಿದೆ. ಅಂತಹುದೇ ಮನಃಸ್ಥಿತಿಯ ಕೆಲವರು ವಿರೋಧ ಮಾಡುತ್ತಿದ್ದಾರೆ. ಕಾವೇರಿ ಆರತಿಯನ್ನು ವಿರೋಧಿಸುವವರು ಪ್ರಗತಿಯ ವಿರೋಧಿಗಳು ಎಂದು ಖಂಡಿಸಿದರು. ಕೆಆರ್‌ಎಸ್‌ನಲ್ಲಿ ಬೇಡ, ಶ್ರೀರಂಗಪಟ್ಟಣದಲ್ಲೇ ಕಾವೇರಿ ಆರತಿ ಮಾಡುವಂತೆ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್‌ನ್ನು ಕೂಡ ಕೆಆರ್‌ಎಸ್ ಹೊರತಾಗಿ ಜಿಲ್ಲೆಯ ಇತರ ಯಾವುದಾದರೂ ಪ್ರದೇಶದಲ್ಲಿ ನಿರ್ಮಿಸುವಂತೆ ನಾವೂ ಕೂಡ ಸರ್ಕಾರ, ಜಿಲ್ಲಾಡಳಿತವನ್ನು ಒತ್ತಾಯಿಸಿದ್ದೇವೆ. ಆದರೆ ಕಾವೇರಿ ಆರತಿ ಕಾರ್ಯಕ್ರಮದಿಂದ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ. ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಈ ಭಾಗದ ಆರ್ಥಿಕತೆಯೂ ಬೆಳವಣಿಗೆ ಹೊಂದಲಿದೆ ಎಂದರು. ಸೇನೆಯ ಜಿಲ್ಲಾಧ್ಯಕ್ಷ ಹರ್ಷ, ನಗರ ಅಧ್ಯಕ್ಷ ಚೇತನ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್‌ಕುಮಾರ್, ಶಿವು, ಸ್ನೇಕ್ ಮಹೇಶ್, ಶೇಷಾದ್ರಿ ಇದ್ದರು.
ಕಾವೇರಿ ಆರತಿ ಬದಲಿಗೆ ಸರ್ಕಾರಿ ಶಾಲೆ ಉಳಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಸಂಘಟನೆಯಿಂದಲೂ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಹೋರಾಟ ಮಾಡಲಾಗಿದೆ. ಆದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಉಳಿಸುವುದರ ಜತೆಗೆ ಕಾವೇರಿ ಆರತಿಯನ್ನು ಆದ್ಯತೆಯಾಗಿ ಕಾಣಬೇಕು. ಅಂತೆಯೇ ಹೋಬಳಿಗೊಂದು ಹೈಟೆಕ್ ಸರ್ಕಾರಿ ಶಾಲೆಗಳನ್ನು ತೆರೆಯಲಿ. ಕನ್ನಡಪರ ಹೋರಾಟಗಾರರು ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲಿ. ಬಿ.ಮಂಜುನಾಥ್ ಬಜರಂಗಸೇನೆ ರಾಜ್ಯಾಧ್ಯಕ್ಷ