

ಮಂಡ್ಯ: ವಕ್ಫ್ ಕಾಯ್ದೆ ಬಡವ, ಮಾನವೀಯ, ದೇಶ ಹಾಗೂ ಸಂವಿಧಾನ ವಿರೋಧಿ ಎಂದು ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ವಾಗ್ದಾಳಿ ನಡೆಸಿದರು.
1913ರಲ್ಲಿ ಬ್ರಿಟಿಷರಿಂದ ರಚನೆಯಾದ ಮುಸಲ್ಮಾನ ಮಂಡಳಿ 1923ರಲ್ಲಿ ವಕ್ಫ್ ಮಂಡಳಿಯಾಗಿ ರೂಪಾಂತರಗೊಂಡಿದೆ. ಇದರ ವಿರುದ್ಧ ಲಂಡನ್‌ನ ಸುಪ್ರೀಂ ನ್ಯಾಯಾಲಯದಲ್ಲಿ ಕೆಲ ಬ್ರಿಟಿಷರೇ ದಾವೆ ಹೂಡಿದ್ದರು. ಪರಿಣಾಮ ನ್ಯಾಯಾಲಯ ವಕ್ಫ್ ಸಾರ್ವಕಾಲಿಕ ಗಂಡಾಂತರ, ಇದನ್ನು ಮೊಟುಕುಗೊಳಿಸಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಸ್ತಿ ಅಥವಾ ಯಾವುದೇ ರೀತಿಯ ನ್ಯಾಯಕ್ಕಾಗಿ ನ್ಯಾಯಾಲಯಗಳ ಕಡೆಗೆ ಮುಖ ಮಾಡುವುದುಂಟು. ಆದರೆ ವಕ್ಫ್ ಸಂಬಂಧ ಜಮೀನಿನ ವ್ಯಾಜ್ಯಕ್ಕೆ ಸಂವಿಧಾನ ಬದ್ಧವಾಗಿ ನ್ಯಾಯಾಲಯಗಳ ಮುಂದೆ ಹಾಜರಾಗುವ ಹಕ್ಕನ್ನು ಕಸಿಯುವ ಕೆಲಸವನ್ನು 2013ರಲ್ಲಿ ಅಂದಿನ ಕೇಂದ್ರ ಸರ್ಕಾರ ಕಸಿದಿದೆ ಎಂದು ಆರೋಪಿಸಿದರು.
ವಕ್ಫ್‌ನಿಂದ ಅಕ್ರಮವಾಗಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ನಿಲ್ಲಬೇಕು. ಈ ನಿಟ್ಟಿನಲ್ಲಿ ಹಾಲಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ತರಲಿಚ್ಛಿಸುವ ತಿದ್ದುಪಡಿಗೆ ರಾಜ್ಯಸರ್ಕಾರ ಸಮ್ಮತಿ ಸೂಚಿಸಬೇಕು. ಅಥವಾ ಆಂದ್ರಪ್ರದೇಶ ರಾಜ್ಯದ ಮಾದರಿ ವಕ್ಫ್ ಅನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
9ರಂದು ಸಾರ್ವಜನಿಕರ ಸಭೆ: ವಕ್ಫ್ ವಿರೋಧಿ ರೈತ ಒಕ್ಕೂಟದ ಬಿ.ಪಿ.ಅಪ್ಪಾಜಿ ಮಾತನಾಡಿ, ವಕ್ಫ್ ಕಾಯ್ದೆ ವಿರೋಧಿಸಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಾರ್ವಜನಿಕ ಸಭೆಯನ್ನು ಡಿ.9ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿದೆ. ಸಭೆಗೂ ಮುನ್ನ ಅಂದು ಬೆಳಗ್ಗೆ 10.30ಕ್ಕೆ ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು.
ವಕ್ಫ್‌ನಿಂದ ಕೃಷಿ ಭೂಮಿ, ಸ್ಮಶಾನ, ಸರ್ಕಾರಿ ಆಸ್ತಿ, ಮಠ ಮಂದಿರ ಹಾಗೂ ಸಾರ್ವಜನಿಕ ಆಸ್ತಿಯನ್ನು ದೇಶಾದ್ಯಂತ ಕಬಳಿಸಲಾಗುತ್ತಿದೆ. ವಕ್ಫ್‌ನ ಕಾಯ್ದೆಗೆ ತಿದ್ದುಪಡಿ ತಂದು ರೈತ, ಸಾರ್ವಜನಿಕ, ಮಠ-ಮಂದಿರ ಹಾಗೂ ಸರ್ಕಾರಿ ಆಸ್ತಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಈ ಸಮಸ್ಯೆ ಉಂಟಾಗಲು 2013ರಲ್ಲಿ ಅಂದಿನ ಕೇಂದ್ರ ಸರ್ಕಾರ ತಿದ್ದುಪಡಿ ತಂದು ವಕ್ಫ್ ಮಂಡಳಿಗೆ ಮಿತಿ ಮೀರಿದ ಅಧಿಕಾರ ನೀಡಿರುವುದರಿಂದಾಗಿ 8000 ಎಕರೆಯಷ್ಟಿದ್ದ ಭೂಮಿ ಇಂದು 9.40 ಲಕ್ಷ ಎಕರೆಗೂ ಹೆಚ್ಚು ವಿಸ್ತಾರವಾಗಿದೆ. ಅಕ್ರಮವಾಗಿ ಆಸ್ತಿ ಹೆಚ್ಚಿಸಿಕೊಳ್ಳುತ್ತಿರುವ ವಕ್ಫ್‌ಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಜೈ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಉಮ್ಮಡಹಳ್ಳಿ ಉಮೇಶ್, ಪ್ರಕಾಶ್, ಮೋಹನ್ ಇದ್ದರು.