

ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸ ನಡೆಸುವುದರ ಜತೆಗೆ 50ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿರುವುದರ ವಿರುದ್ಧ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಜು.11ರಂದು ವಿಚಾರಣೆ ನಡೆಯಲಿದೆ ಎಂದು ಬಜರಂಗ ಸೇನೆ-ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಹೇಳಿದರು.
ಅಕ್ರಮವಾಗಿ ನಡೆಯುತ್ತಿರುವ ಮದರಸ ಹಾಗೂ ಅಲ್ಲಿರುವ ವಿದ್ಯಾರ್ಥಿಗಳನ್ನ ತೆರವುಗೊಳಿಸುವಂತೆ ಪಿಐಎಲ್ ಮೂಲಕ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ. ನಮ್ಮ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಮಂಡ್ಯ ಜಿಲ್ಲಾಧಿಕಾರಿ, ಪುರಾತತ್ವ ಇಲಾಖೆ, ಮುಜರಾಯಿ ಇಲಾಖೆ ಹಾಗೂ ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ದೃಷ್ಟಿಯಿಂದ ಅಂತಹ ಕಟ್ಟಡಗಳಲ್ಲಿ ಯಾರೂ ವಾಸ್ತವ್ಯ ಮಾಡುವಂತಿಲ್ಲವೆಂಬ ನಿಯಮವನ್ನು ಸರ್ಕಾರ 1958ರಲ್ಲಿ ಜಾರಿಗೊಳಿಸಿದೆ. ಆದರೆ, 1978ರಿಂದಲೂ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಮಸೀದಿ ಮೂಲತಃ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯ. ಅದನ್ನು ಒಡೆದು ಮಸೀದಿ ಮಾಡಲಾಗಿದೆ. ದೇವರ ಮೂರ್ತಿಯನ್ನು ಕಾವೇರಿ ನದಿಗೆ ಬಿಸಾಡಲಾಗಿತ್ತು. ಅದನ್ನು ನದಿಯಿಂದ ಹೊರ ತೆಗೆದು ಬೇರೆ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿಕೊಂಡು ಬರಲಾಗುತ್ತದೆ. ಮಸೀದಿ ಮತ್ತೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯವಾಗಬೇಕೆಂಬುದು ನಮ್ಮ ಬೇಡಿಕೆ ಎಂದರು.
ಮಸೀದಿ ನಿರ್ವಹಣೆಗಾಗಿ ಪ್ರತಿ ತಿಂಗಳು 5 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸರ್ಕಾರ ನೀಡುತ್ತಿದೆ. ಆದರಲ್ಲಿ ಅಕ್ರಮವಾಗಿ ಮದರಸ ನಡೆಸಲಾಗುತ್ತಿದೆ. ಜತೆಗೆ, ಅಲ್ಲಿನ ವಿದ್ಯಾರ್ಥಿಗಳು ಮಸೀದಿಯೊಳಗಿನ ಆಂಜನೇಯಸ್ವಾಮಿ ದೇವಾಲಯದ ಕಂಬಗಳ ಕೆತ್ತನೆಗಳನ್ನು ಕಲ್ಲಿನಿಂದ ಒಡೆದು ವಿರೂಪಗೊಳಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮತ್ತು ಕೋರ್ಟ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ವೈ.ಎಚ್.ಹರ್ಷ, ಉಪಾಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿಗಳಾದ ಸತೀಶ್, ದೀಪು, ಮಂಡ್ಯ ನಗರ ಘಟಕದ ಅಧ್ಯಕ್ಷ ಆರ್.ಚೇತನ್‌ಕುಮಾರ್ ಹಾಜರಿದ್ದರು.