ಬಾನು ಮುಷ್ತಾಕ್ ಆಯ್ಕೆ ಸರಿಯಲ್ಲ: ಬಜರಂಗಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಆಕ್ರೋಶ

Bajrang Sena press conference Mandya
Published on

ಮಂಡ್ಯ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪಿಕೊಳ್ಳದ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಬಜರಂಗಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಬಾನು ಮುಸ್ತಾಕ್ ಅವರು 2023ರಲ್ಲಿ ನಡೆದ ಸಮಾರಂಭವೊಂದರಲ್ಲಿ ಕನ್ನಡ ತಾಯಿಯನ್ನು ಅರಿಶಿಣ-ಕುಂಕುಮದಲ್ಲಿ ಅಲಂಕರಿಸಿ, ಧ್ವಜವನ್ನೂ ಅದೇ ಬಣ್ಣದಲ್ಲಿ ಹಾರಿಸುತ್ತಿದ್ದಾರೆ. ಅಲ್ಪಸಂಖ್ಯಾತಳಾದ ನಾನು ಹೇಗೆ ಅದನ್ನು ಒಪ್ಪಿಕೊಳ್ಳಲಿ ಎನ್ನುವ ಮೂಲಕ ಮತಾಂಧತೆಯ ಸಂದೇಶವನ್ನು ನೀಡಿದರು. ಹೀಗಿರುವಾಗ ನಮ್ಮ ಧಾರ್ಮಿಕ ಆಚರಣೆಯಲ್ಲಿ ಭಾಗಿಗಳನ್ನಾಗಿ ಮಾಡಲು ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ರಾಜ್ಯ ಸರ್ಕಾರಕ್ಕೆ ಅವರ ಬಗ್ಗೆ ಮೃಧು ಧೋರಣೆ ಇದ್ದರೆ ಅವರನ್ನು ಮುಂದಿನ ವರ್ಷ ಬಳ್ಳಾರಿಯಲ್ಲಿ ನಡೆಯುವ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ ಅಥವಾ ಕನ್ನಡ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಿ. ಅದು ಬಿಟ್ಟು ದಸರಾ ಉತ್ಸವನಾಡಿನ ಹಬ್ಬವಾಗಿದ್ದು, ಹಿಂದುಗಳ ಧಾರ್ಮಿಕ ಆಚರಣೆಯಾಗಿದೆ. 9 ದಿನಗಳು ಅತ್ಯಂತ ಶ್ರದ್ಧೆಯಿಂದ ನವದುರ್ಗೆಯರನ್ನು ಪೂಜಿಸಿ ಕೊನೆಯ ದಿನ ವಿಜಯದಶಮಿಯನ್ನು ಆಚರಣೆ ಮಾಡುತ್ತೇವೆ. ಇಂತಹ ಹಿಂದುಗಳ ಹಬ್ಬದ ಉದ್ಘಾಟನೆಗೆ ಚಾಮುಂಡೇಶ್ವರಿಯ ಬಗ್ಗೆ ಭಕ್ತಿ ಇಲ್ಲದ ಮಹಿಳೆಯನ್ನು ನಿಯೋಜಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾಯಿ ಚಾಮುಂಡೇಶ್ವರಿ ಬಗ್ಗೆ ಗೌರವಿದೆ ಎಂದು ಹೇಳಿರುವ ಬಾನು ಮುಸ್ತಾಕ್ ಅವರಿಗೆ ತಾಯಿಯ ಬಗ್ಗೆ ಗೌರವ ಇದೆ ಎನ್ನುತ್ತಾರೆಯೇ ಹೊರತು ಭಕ್ತಿ ಇದೆ ಎಂದು ಹೇಳಲಿಲ್ಲ. ಮೊದಲು ಅವರಿಗೆ ಚಾಮುಂಡೇಶ್ವರಿ ಬಗ್ಗೆ ಭಕ್ತಿ ಇದೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ ಬಿ.ಮಂಜುನಾಥ್, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಗಳ ಭಾವನೆಗಳ ಜತೆಗೆ ಮಾತ್ರ ಇಂತಹ ಮನೋಭಾವ ತೋರುತ್ತದೆ. ಲಕ್ಷಾಂತರ ರೂ ವೆಚ್ಚ ಮಾಡಿ ಹಜ್ ಯಾತ್ರೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದ ಉದ್ಘಾಟನೆಗೆ ಹಿಂದುಗಳು, ಸಾಧು, ಸಂತರರನ್ನು ಏಕೆ ನಿಯೋಜಿಸುವುದಿಲ್ಲ. ಇದು ಹಿಂದುಗಳ ಭಾವನೆಗಳ ಮೇಲೆ ಮಾಡುವ ಪ್ರಹಾರವಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ ಸೆಪ್ಟಂಬರ್‌ನಲ್ಲಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದರು.

ಸೇನೆಯ ಪದಾಧಿಕಾರಿಗಳಾದ ಹರ್ಷ, ಚೇತನ್, ಶಿವು, ಶೇಷಾದ್ರಿ, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net