ಬೆಂಗಳೂರಿನಲ್ಲಿ ಬಂಧಿಸಿದವರನ್ನುಅಂಡಮಾನ್ ಜೈಲಿಗೆ ಸ್ಥಳಾಂತರಿಸಿ: ಭಜರಂಗ ಸೇನೆಯಿಂದ ಡಿಸಿಗೆ ಮನವಿ ಸಲ್ಲಿಕೆ

1 (5)
Published on

ಮಂಡ್ಯ: ಬೆಂಗಳೂರಿನಲ್ಲಿ ಬಂಧಿಸಿರುವ ಶಂಕಿತ ಉಗ್ರಗಾಮಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ತರಬೇತಿಗೊಳಿಸಿರುವುದರಿಂದ ಬಂಧಿತರನ್ನು ಅಂಡಮಾನ್ ಜೈಲಿಗೆ ಸ್ಥಳಾಂತರ ಮಾಡಬೇಕು ಎಂದು ಭಜರಂಗ ಸೇನೆ ಕರ್ನಾಟಕ ಒತ್ತಾಯಿಸಿದೆ.

ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದ ಸೇನೆಯ ಕಾರ್ಯಕರ್ತರು, ಅಪರಾಧ ಪತ್ತೆದಳ ಪೊಲೀಸರು ಉಗ್ರರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತಾಸ್ತಗಳನ್ನು ವಶಪಡಿಸಿಕೊಂಡಿರುತ್ತಾರೆ. ಆ ಮೂಲಕ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಿದ್ದಾರೆ. ಬಂಧಿತರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ರೈನ್‌ವಾಷ್ ಮಾಡಿ ಉಗ್ರ ಕೃತ್ಯಕ್ಕೆ ತಯಾರಿ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೈಲಿನಲ್ಲಿ ಜಾಮರ್ ಇದ್ದರೂ ಸಹ ಹೊರ ಜಗತ್ತಿಗೆ ಸಂಪರ್ಕದಲ್ಲಿರುವುದು ಆಶ್ಚರ್ಯ ತಂದಿದ್ದು, ಮೊಬೈಲ್ ಬಳಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳನ್ನು ಗುರುತಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಬಂಧಿತರನ್ನು ಪರಪ್ಪನ ಅಗ್ರಹಾರದಲ್ಲಿ ಬಂಧನದಲ್ಲಿ ಇರಿಸಿದರೆ ಅವರು ಮತ್ತೊಮ್ಮೆ ಉಗ್ರ ಕೃತ್ಯ ಎಸಗಲು ಸಂಚು ರೂಪಿಸುತ್ತಾರೆ. ಇದಕ್ಕೆ ಸರ್ಕಾರವೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲದೆ ಜೈಲಿನಲ್ಲಿ ಇರುವವರನ್ನು ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ. ಹಾಗಾಗಿ ಅಂಡಮಾನ್ ಜೈಲಿಗೆ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸೇನೆಯ ರಾಜ್ಯಾಧ್ಯಕ್ಷ ಬಿ.ಮಂಜುನಾಥ್, ಜಿಲ್ಲಾಧ್ಯಕ್ಷ ವೈ.ಎಚ್.ಹರ್ಷ, ಜಿಲ್ಲಾ ಕಾರ್ಯದರ್ಶಿ ಸತೀಶ್‌ಕುಮಾರ್, ನಗರ ಅಧ್ಯಕ್ಷ ಚೇತನ್‌ಕುಮಾರ್, ಬಿ.ಜೆ.ಧನಂಜಯ, ರವಿಕುಮಾರ್, ಸವ್ಯಸಾಚಿ, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net