ಬಜರಂಗದಳ ನಾಯಕ ದಿ.ವಿಜೇಶ್ ನುಡಿನಮನ : ಕುಟುಂಬಕ್ಕೆ 20 ಲಕ್ಷ ರೂ.ಆರ್ಥಿಕ ನೆರವಿಗೆ ನಿರ್ಧಾರ

New Project (49)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ವಿವಿಧ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೊಟ್ಟು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಬಜರಂಗದಳದ ನಗರ ಸಂಚಾಲಕ, ನೇತಾಜಿ ಬ್ರಿಗೇಡ್‌ನ ಕ್ರಿಯಾಶೀಲ ಸದಸ್ಯ ದಿ.ವಿಜೇಶ್ ನೆನಪಿಗಾಗಿ ಅವರ ಕುಟುಂಬಕ್ಕೆ ರೂ.20 ಲಕ್ಷ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.

ಸೋಮವಾರ ಸಮಾಜ ಮಂದಿರದಲ್ಲಿ ವಿಜೇಶ್ ಗೌರವಾರ್ಥವಾಗಿ ನುಡಿನಮನ ಕಾರ್ಯಕ್ರಮ ನಡೆಯಿತು.

ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ವಿಜೇಶ್ ಗೋಮಾತೆಯ ರಕ್ಷಣೆ ಜತೆಗೆ ಬಡವರ ಕಷ್ಟಗಳಿಗೆ ಸ್ಪಂದಿಸಿ ಹಿಂದು ಸಮಾಜಕ್ಕೆ ಆಪದ್ಬಾಂಧವರಾಗಿ ಕೆಲಸ ವಾಡಿದ್ದರು. ದೇವರ ಸೇವೆ ವಾಡುತ್ತಲೇ ಮರಣ ಹೊಂದಿದರು. ಅವರ ಮನೆಯವರಿಗೆ ಆರ್ಥಿಕ ಶಕ್ತಿ ಮತ್ತು ಆತ್ಮಸ್ಥೈರ್ಯ ತುಂಬಿ ಅವರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸವಾಗಬೇಕು ಎಂದರು.

ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಮತ್ತು ಈದು ಬಲ್ಯೊಟ್ಟು ಕ್ಷೇತ್ರದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ವಿಜೇಶ್ ತನ್ನ ಸಮರ್ಪಣಾಭಾವದಿಂದ ಹಿಂದು ಸವಾಜಕ್ಕೆ ಆದರ್ಶರಾಗಿದ್ದರು. ತನ್ನ ಕಷ್ಟವನ್ನು ಮರೆತು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ವಿಜೇಶ್ ಸ್ನೇಹಜೀವಿ ಹಾಗೂ ತಾಳ್ಮೆಯ ಗುಣ ಹೊಂದಿದ್ದರು. ಹಿಂದು ಸವಾಜಕ್ಕೆ ಶಕ್ತಿ ತುಂಬಿದ್ದಾರೆ. ಬಿಜೆಪಿ ಕಾರ್ಯಕರ್ತರು ಸೇರಿ ಕುಟುಂಬದವರಿಗೆ 5 ಲಕ್ಷ ರೂ. ಹಣ ನೀಡುವುದಾಗಿ ತಿಳಿಸಿದರು.

ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗೀಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ವಿಜೇಶ್ ಕುಟುಂಬಕ್ಕೆ ವಿಹಿಂಪದಿಂದ 15 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ನವೀನ್ ಮೂಡುಶೆಡ್ಡೆ ಪ್ರಸ್ತಾವಿಸಿದರು. ಗೋಪಾಲ್ ಶೆಟ್ಟಿಗಾರ್ ನಿರೂಪಿಸಿದರು. ಸುಚೇತನ್ ಜೈನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net