ಬಾಂಗ್ಲಾ ದೇಶದ ವಿರುದ್ಧ ಕ್ರಮವಾಗಲಿ: ನಗರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ

Bajrang Dal and BJP workers protest Mandya
Published on

ಮಂಡ್ಯ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿ, ಕೊಲೆ, ಅತ್ಯಾಚಾರ ಖಂಡಿಸಿ ನಗರದಲ್ಲಿ ಹಿಂದು ಹಿತರಕ್ಷಣಾ ಸಮಿತಿ, ಬಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಬಾಂಗ್ಲಾ ಮುಸ್ಲಿಂರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಅಲ್ಲಿನ ಹಿಂದು ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಬೇಕಾದರೆ ಕೇಂದ್ರ ಸರ್ಕಾರ ಬಾಂಗ್ಲಾ ದೇಶದ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಬಾಂಗ್ಲಾದ ಹಂಗಾಮಿ ಪ್ರಧಾನಿ ಮಹಮ್ಮದ್ ಯೂನಸ್ ಒಬ್ಬ ಅಸಮರ್ಥ. ದೇಶದಲ್ಲಿ ಶಾಂತಿ ಕಾಪಾಡದ ವ್ಯಕ್ತಿಗೆ ನೋಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿರುವುದು ದುರಂತ. ಕೇವಲ ಬಲಾಢ್ಯ ರಾಷ್ಟ್ರ ಹಾಗೂ ನಿರ್ದಿಷ್ಟ ಧರ್ಮಗಳಿಗೆ ಮಾತ್ರ ಸೀಮಿತವಾಗಿರುವ ವಿಶ್ವಸಂಸ್ಥೆ ಹಿಂದುಗಳ ಮೇಲೆ ದಬ್ಬಾಳಿಕೆಯಾದಾಗ ಬಾಯಿ ಮುಚ್ಚಿ ಕುಳಿತುಕೊಂಡಿರುವುದು ಅತ್ಯಂತ ಖಂಡನೀಯ. ಬಾಂಗ್ಲಾದೇಶದ ಹಿಂದುಗಳಿಗೆ ಶಾಶ್ವತವಾಗಿ ನ್ಯಾಯ ಸಿಗಬೇಕೆಂದರೆ ಇಬ್ಭಾಗ ಮಾಡಬೇಕು. ಈ ಮೂಲಕ ಹಿಂದುಗಳಿಗೆ ಪ್ರತ್ಯೇಕ ರಾಷ್ಟ್ರ ಕೊಡಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಟಿ.ಎಸ್.ವಿವೇಕ್, ಹರ್ಷ, ಚೇತನ್, ಸತೀಶ್, ಶ್ರೀಧರ್, ಹೊಸಹಳ್ಳಿ ಶಿವು, ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net