

ತುಮಕೂರು: ಮಹಾನಗರ ಪಾಲಿಕೆಯ 2020-21ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕುಂದುಕೊರತೆ, ಸಮಸ್ಯೆಗಳ ಜತೆಗೆ ನನ್ನ ಕಸ-ನನ್ನ ಜವಾಬ್ದಾರಿ ಎಂಬ ಹೊಸ ಕಾರ್ಯಕ್ರಮ ೋಷಣೆ ಹಾಗೂ ಆಸ್ತಿ ತೆರಿಗೆ ಹೆಚ್ಚಿಸಬಾರದೆಂಬ ಸಲಹೆಗಳ ಕೂಗು ಕೇಳಿಬಂತು.
ಪಾಲಿಕೆ ಸಭಾಂಗಣದಲ್ಲಿ ಶನಿವಾರ 2020-21ನೇ ಸಾಲಿನ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯು ಮೇಯರ್ ಫರಿದಾಬೇಗಂ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಸ್ವಚ್ಛತೆ ಕಾಪಾಡಲು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಈ ಬಾರಿಯ ಬಜೆಟ್‌ನಲ್ಲಿ ‘ನನ್ನ ಕಸ-ನನ್ನ ಜವಾಬ್ದಾರಿ’ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸುವಂತೆ ರಂಗಕರ್ಮಿ ಡಮರುಗ ಉಮೇಶ್ ಸಲಹೆಯಿತ್ತರು. ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಪ್ರತಿ ಮನೆ ಹಂತದಲ್ಲೇ ಕಸ ಪ್ರತ್ಯೇಕಗೊಳಿಸಿ ವೈಜ್ಞಾನಿಕ ವಿಲೇವಾರಿ ಸುಲಭವಾಗಲಿದೆ ಎಂದರು.
ಆಸ್ತಿ ತೆರಿಗೆ ಈ ಬಾರಿ ಯಾವುದೇ ಕಾರಣಕ್ಕೂ ಹೆಚ್ಚಿಸಬಾರದು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜನಸ್ನೇಹಿ ಬಜೆಟ್ ನೀಡುವಂತೆ ಮಾಜಿ ನಗರಸಭಾ ಸದಸ್ಯ ಕೆ.ಪಿ.ಮಹೇಶ್ ಮನವಿ ಮಾಡಿದರು. ವಾರ್ಡ್ ಸಮಿತಿಯನ್ನು ಇನ್ನೂ ರಚಿಸಿಲ್ಲ. ಡಿಜಿಟಲ್ ಯುಗದಲ್ಲೂ ಪಾಲಿಕೆ ಕಚೇರಿ ಇನ್ನೂ ಕಾಗದರಹಿತವಾಗಿಲ್ಲ. ಭೌಗೋಳಿಕ ಆಸ್ತಿ ಸಮೀಕ್ಷೆ , ಪಾರ್ಕ್‌ಗಳ, ಫುಟ್‌ಪಾತ್ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿದರು.
ಯಾವುದೇ ಸೌಕರ್ಯ ಕಲ್ಪಿಸಲಾಗಿಲ್ಲ: ತೆರಿಗೆ ಪಾವತಿಸಲು ಎಲ್ಲ ಕೈಗಾರಿಕೋದ್ಯಮಿಗಳೂ ಸಿದ್ಧರಿದ್ದಾರೆ. ಆದರೆ ಈ ಕೈಗಾರಿಕಾ ಪ್ರದೇಶಗಳಿಗೆ ಪಾಲಿಕೆಯಿಂದ ಯಾವುದೇ ಸೌಕರ್ಯ ಕಲ್ಪಿಸಲಾಗಿಲ್ಲ. ಹಾಗಾಗಿ, ಗ್ರಾಮೀಣ ಪ್ರದೇಶದ ಸುತ್ತೋಲೆಗೆ ಅನುಗುಣವಾಗಿ ಪಡೆಯಲು ನಮ್ಮ ಅಭ್ಯಂತರವೇನೂ ಇಲ್ಲ. ಹೊಸ ಸುತ್ತೋಲೆ ಬಂದ ಬಳಿಕ ಅದಕ್ಕೆ ಅನುಗುಣವಾಗಿ ನಾವು ತೆರಿಗೆ ಕಟ್ಟಲು ಸಿದ್ಧ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ತಿಳಿಸಿದರು.
ಕೈಗಾರಿಕಾ ತೆರಿಗೆ ಸಂಗ್ರಹ ಬೇಡ: ನಗರಕ್ಕೆ ಹೊಂದಿಕೊಂಡಿರುವ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಿಸುವ ಸಂಬಂಧ ಸರ್ಕಾರಿ ಸುತ್ತೋಲೆ ನಂತರವಷ್ಟೇ ಪಾಲಿಕೆ ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಸಲಹೆ ನೀಡಿದರು.ಕೈಗಾರಿಕೋದ್ಯಮಿ ರಾಜಗೋಪಾಲ್, ಜಿ.ಕೆ.ಶ್ರೀನಿವಾಸ್, ಜಿ.ಎಸ್.ಬಸವರಾಜು, ಇಮ್ರಾನ್‌ಪಾಷ, ಶ್ರೀನಿಧಿ ರಾಜಣ್ಣ, ರಾಜು, ಆಶಾರಾಣಿ, ರೇಖಾ, ನಗರಸಭಾ ಮಾಜಿ ಸದಸ್ಯೆ ಸುಜಾತಾ ಚಂದ್ರಶೇಖರ್ ಸಲಹೆಗಳನ್ನು ಹಂಚಿಕೊಂಡರು.
ಸ್ಥಾಯಿ ಸಮಿತಿ ಅಧ್ಯಕ್ಷರಿಗೇ ಸಭೆಯ ಮಾಹಿತಿ ಇಲ್ಲ: ಬಜೆಟ್ ಪೂರ್ವಭಾವಿ ಸಭೆ ಬಗ್ಗೆ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯಗೆ ಮಾಹಿತಿಯೇ ಇರಲಿಲ್ಲ. ಪತ್ರಿಕಾ ಛಾಯಾಗ್ರಾಹಕ ರೊಬ್ಬರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಅವರು ಸಭೆಗೆ ಹಾಜರಾಗಿದ್ದು ಪಾಲಿಕೆ ಆಡಳಿತಕ್ಕೆ ಸಾಕ್ಷಿಯಾಗಿತ್ತು. ಸಭೆ ಬಗ್ಗೆ ಸಾಕಷ್ಟು ಸದಸ್ಯರಿಗೂ ಮಾಹಿತಿ ಇಲ್ಲ.ಉಪಮೇಯರ್ ಶಶಿಕಲಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ, ಆಯುಕ್ತ ಟಿ.ಭೂಬಾಲನ್, ಲೆಕ್ಕಾಧಿಕಾರಿ ಶ್ರೀನಿವಾಸ್ ಇದ್ದರು.