ಟ್ರೇಡ್ ಲೈಸೆನ್ಸ್ ನವೀಕರಣ ಸರಳ ? ; ಮಹಾನಗರ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆ : ತುಮಕೂರು ನಗರದ ನಾಲ್ಕು ದಿಕ್ಕುಗಳಲ್ಲಿ ಸ್ವಾಗತ ಕಮಾನು ನಿರ್ಮಿಸಿ

28Tmk_Palike_Budget
Published on

ತುಮಕೂರು : ಪಾಲಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಾಣಿಜ್ಯ ಪರವಾನಗಿ ನವೀಕರಣ ಪ್ರಕ್ರಿಯೆ ಸರಳೀಕರಣಗೊಳಿಸುವುದು, ಸ್ವಾಗತ ಕಮಾನು ನಿರ್ಮಾಣ, ಮನೆ ಸಂಖ್ಯೆ, ತುಮಕೂರಿಗೊಂದು ವಿಶಿಷ್ಟ ಪ್ರತಿಕೃತಿ, ಕರೊನಾ ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸಿದ ಖಾಸಗಿ ಆಸ್ಪತ್ರೆಗಳ ಕಂದಾಯ ಮನ್ನಾ ಮಾಡುವಂತೆ ಮಹಾನಗರ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಲಹೆಗಳು ಕೇಳಿಬಂದವು.

ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ 2022-23ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದ ಪರಿಸರ ತಜ್ಞ, ವನ್ಯಜೀವಿ ಜಾಗೃತಿ ಸಂಸ್ಥೆಯ ಟಿ.ವಿ.ಎನ್.ಮೂರ್ತಿ, ನಗರದಲ್ಲಿ ವಾಣಿಜ್ಯ ಚಟುವಟಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದರೂ ಪ್ರತೀ ಬಾರಿ ಪಾಲಿಕೆ ಖೋತಾ ಬಜೆಟ್ ಮಂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆದಾಯ ಹೆಚ್ಚಿಸಲು ಟ್ರೇಡ್ ಲೈಸೆನ್ಸ್ ನವೀಕರಣಕ್ಕಿರುವ ಕಠಿಣ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು. ಹೊಸ ಮಳಿಗೆ ತೆರೆಯಲು ಈಗಿರುವ ಪ್ರಕ್ರಿಯೆ ಮುಂದುವರಿಸಲಿ ಎಂದು ಸಲಹೆ ನೀಡಿದರು.

ಸ್ವಾಗತ ಕಮಾನು ನಿರ್ಮಿಸಿ: ತುಮಕೂರು ನಗರ ಗುರುತಿಸುವ ಸ್ವಾಗತ ಕಮಾನು ನಮ್ಮಲ್ಲಿ ಇಲ್ಲ. ಹಾಗಾಗಿ, ಬೆಂಗಳೂರು ಭಾಗ, ಶಿರಾ ಕಡೆ, ಶಿವಮೊಗ್ಗ , ಕುಣಿಗಲ್ ರಸ್ತೆಗಳಲ್ಲಿ ಬೃಹತ್ ಸ್ವಾಗತ ಕಮಾನುಗಳನ್ನು ನಿರ್ಮಿಸುವಂತೆ ಮೂರ್ತಿ ಸಲಹೆಯಿತ್ತರು. ಇದರ ಜತೆಗೆ ಅಮಾನಿಕೆರೆಯಲ್ಲಿ ಅಂತರಗಂಗೆ ತೆಗೆದು ಸ್ವಚ್ಛಗೊಳಿಸಲು ಯಂತ್ರಚಾಲಿತ ಬೋಟ್ ನೀಡಬೇಕು, ಪಾಲಿಕೆ ವತಿಯಿಂದಲೇ ಎಲ್ಲ ವಾರ್ಡ್‌ಗಳಲ್ಲಿ ಮನೆಸಂಖ್ಯೆಗಳನ್ನು ನೀಡಬೇಕು ಎಂದು ಸಭೆಯ ಗಮನ ಸೆಳೆದರು.

ತುಮಕೂರು ನಗರದ ಬ್ರಾಂಡಿಂಗ್‌ಗೆ ವಿಶಿಷ್ಟವಾದ ತೋರ‌್ಗುರುತು (ಐಕಾನ್ ಸ್ಟ್ರಕ್ಚರ್) ನಿರ್ಮಿಸುವ ಅಗತ್ಯ ಇದೆ. ವಿದೇಶಗಳಲ್ಲಿ ಆಯಾ ಸ್ಥಳಗಳ ವಿಶೇಷಗಳನ್ನು ಗುರುತಿಸುವ ವಾಡಿಕೆ ಇದೆ. ಅದೇ ರೀತಿ ತುಮಕೂರನ್ನು ಕಲ್ಪತರು ನಾಡು, ಗುಬ್ಬಿವೀರಣ್ಣ , ಶತಮಾನಕಂಡ ಸಂತ ಶಿವಕುಮಾರ ಸ್ವಾಮೀಜಿ ಈ ರೀತಿಯಾಗಿ ಗುರುತಿಸುವ ಪ್ರತಿಕೃತಿ ನಿರ್ಮಿಸುವ ಅಗತ್ಯವಿದೆ ಎಂದರು.

ಸಿದ್ಧಗಂಗಾ ಮಠಕ್ಕೆ ತೆರಳುವ ಕ್ಯಾತಸಂದ್ರ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ಇದರಿಂದ ಪ್ರತಿನಿತ್ಯ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಪಾಲಿಕೆ ಇತ್ತ ಗಮನ ಹರಿಸುವಂತೆ ಸ್ಥಳೀಯ ನಿವಾಸಿ ವಿಶ್ವನಾಥ್ ಸಭೆಯಲ್ಲಿ ಒತ್ತಾಯಿಸಿದರು.

ಕೊಳೆಗೇರಿ ನಿವಾಸಿಗಳಿಗೆ 24 X 7 ಉಚಿತ ಕುಡಿಯುವ ನೀರು ಪೂರೈಕೆ, ಸಾರ್ವಜನಿಕ ಸ್ಮಶಾನಕ್ಕೆ ಭೂಮಿ ಮಂಜೂರು, ಆದ್ಯತೆ ಮೇರೆಗೆ ವಿದ್ಯುತ್ ಚಿತಾಗಾರ ನಿರ್ಮಾಣ, ನಗರದ ಪ್ರಮುಖ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಆಯಾ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಿಸಬೇಕು, ಬೀದಿ ನಾಯಿಗಳು-ಹಂದಿಗಳ ಹಾವಳಿ ತಡೆಯಲು ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡುವಂತೆ ಸಾರ್ವಜನಿಕರು ಸಲಹೆಗಳನ್ನಿತ್ತರು. ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಆಯುಕ್ತೆ ರೇಣುಕಾ, ಮುಖ್ಯಲೆಕ್ಕಾಧಿಕಾರಿ ಗುರಬಸವಯ್ಯ, ಉಪ ಆಯುಕ್ತ ಗಿರೀಶ್ ಉಪಸ್ಥಿತರಿದ್ದರು.

ಕಂದಾಯ ಮನ್ನಾಕ್ಕೆ ಆಗ್ರಹ : ಕರೊನಾ ಸಮಯದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದ್ದು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಕಂದಾಯ ಮನ್ನಾ ಮಾಡುವಂತೆ ಖಾಸಗಿ ನರ್ಸಿಂಗ್ ಹೋಂನ ಡಾ.ಲಕ್ಷ್ಮೀಕಾಂತ್ ಮನವಿ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಮೇಯರ್ ಬಿ.ಜಿ.ಕೃಷ್ಣಪ್ಪ, ಉಚಿತವಾಗೇನು ನೀವು ಸೇವೆ ನೀಡಿಲ್ಲ. ಆದರೂ, ಆರೋಗ್ಯ ಸೇವೆ ಒದಗಿಸಿರುವುದರಿಂದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದರು.

ಧ್ವನಿ-ಬೆಳಕು ಯೋಜನೆ ಅಳವಡಿಸಿ : ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿನ ಆಲದಮರಗಳನ್ನು ಸಂರಕ್ಷಿಸಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸಿರುವ ಆಲದಮರ ಪಾರ್ಕ್‌ನಲ್ಲಿ ವಾರಾಂತ್ಯದಲ್ಲಿ 15 ನಿಮಿಷಗಳ ಧ್ವನಿ-ಬೆಳಕು ಯೋಜನೆ ಅಳವಡಿಸಿ, ಗಿಡ-ಮರ-ಪಕ್ಷಿಗಳ ಕುರಿತು ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮ ರೂಪಿಸುವ ಮೂಲಕ ಸಾರ್ವಜನಿಕರನ್ನು ಸೆಳೆಯುವ ಉತ್ತಮ ಅವಕಾಶವನ್ನು ಪಾಲಿಕೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಟಿ.ವಿ.ಎನ್.ಮೂರ್ತಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net