ಬಜೆ ಡ್ಯಾಂಗೆ ನೀರು ಪಂಪ್, ನಗರಸಭೆಯಿಂದ ಮುಂಜಾಗ್ರತಾ ಕ್ರಮ

baje dam
Published on

ಉಡುಪಿ: ಹಿರಿಯಡ್ಕ ಪಂಚಾಯಿತಿ ವ್ಯಾಪ್ತಿಯ ಪಂಚನಬೆಟ್ಟುವಿನ ಸಾಣೆಬೆಟ್ಟು ಎಂಬಲ್ಲಿ ಸ್ವರ್ಣಾ ನದಿಯಲ್ಲಿ ಮೂರು ಪಂಪುಗಳನ್ನು ಅಳವಡಿಸಿ ನೀರನ್ನು ಮೇಲಕ್ಕೆತ್ತಿ ಶಿರೂರು ಡ್ಯಾಮಿಗೆ ಹರಿಸಿ ಅಲ್ಲಿಂದ ಎರಡು ಪಂಬ್ ಬಳಸಿ ನಗರಕ್ಕೆ ನೀರು ಸರಬರಾಜು ಮಾಡುವ ಬಜೆ ಡ್ಯಾಂಗೆ ನೀರು ತುಂಬಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕಳೆದ ವರ್ಷ ಹೀಗೆ ನೀರಿನ ಮೂಲಗಳಿಂದ ಬಜೆಗೆ ನೀರು ಹರಿಸದ ಪರಿಣಾಮ ನಗರಕ್ಕೆ ನೀರು ಪೂರೈಕೆಯಲ್ಲಿ ತೀವ್ರ ಸಮಸ್ಯೆಯಾಗಿತ್ತು. ಹೀಗಾಗಿ ಈ ಬಾರಿ ನಗರಸಭೆ ಏಪ್ರಿಲ್‌ನಲ್ಲೇ ಮುಂಜಾಗ್ರತೆ ವಹಿಸಿದ್ದು, ಮೇ ಅಂತ್ಯದವರೆಗೆ ನೀರು ಸರಬರಾಜು ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ. ಪ್ರಸ್ತುತ ನಗರವನ್ನು ಮೂರು ವಲಯಗಳಾಗಿ ವಿಂಗಡಿಸಿ ದಿನಕ್ಕೆ 6 ಗಂಟೆ ನೀರು ಒದಗಿಸಲಾಗುತ್ತಿದೆ. ಇದು ಯಥಾ ಪ್ರಕಾರ ಮುಂದುವರಿಯಲಿದ್ದು, ನಗರಸಭೆ ವ್ಯಾಪ್ತಿಗೆ ಹೊಂದಿಕೊಂಡ ಗ್ರಾಪಂಗಳಿಗೂ ದಿನಕ್ಕೆ 6 ಗಂಟೆ ಕುಡಿಯುವ ನೀರನ್ನು ನೀಡಲು ಕ್ರಮಕೈಗೊಳ್ಳಲಾಗಿದೆ.

ಕಳೆದ ವರ್ಷ ಬೇಸಗೆಯಲ್ಲಿ ನೀರು ಪೂರೈಕೆಗೆ ಯೋಜನಾಬದ್ಧ ಕ್ರಮಕೈಗೊಳ್ಳದ ಪರಿಣಾಮ ನಗರದಲ್ಲಿ ನೀರೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಏಪ್ರಿಲ್‌ನಲ್ಲೇ ನೀರುಗುಂಡಿಗಳನ್ನು ಗುರುತಿಸಿ ನೀರು ಆವಿಯಾಗುವ ಮುನ್ನವೇ ಬಜೆ ಡ್ಯಾಂಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಇಂಥ ನೀರುಗುಂಡಿಗಳಲ್ಲಿ ನಗರಕ್ಕೆ 15ರಿಂದ 20 ದಿನಕ್ಕೆ ಬೇಕಾಗುವಷ್ಟು ನೀರಿದೆ.

- ಕೆ.ರಘುಪತಿ ಭಟ್, ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net