ಬಜಕೂಡ್ಲು ಸ್ಟೇಡಿಯಂ ನವೀಕರಣ : ಕೋಟಿ ಮೊತ್ತದಲ್ಲಿ ನಡೆಯಲಿದೆ ಕಾಮಗಾರಿ

New Project (6)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಮಿನಿ ಸ್ಟೇಡಿಯಂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮೀಸಲಿರಿಸಿರುವ ಕೋಟಿ ರೂ. ಮೊತ್ತದ ನವೀಕರಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಯಾವ ರೀತಿಯಲ್ಲಿ ಕಾಮಗಾರಿ ನಡೆಸಲಿದ್ದಾರೆ ಎಂಬ ಬಗ್ಗೆ ಕ್ರೀಡಾಳುಗಳು ಹಾಗೂ ಪಂಚಾಯಿತಿ ವ್ಯಾಪ್ತಿಯ ಕ್ಲಬ್ ಪದಾಧಿಕಾರಿಗಳಲ್ಲಿ ಉತ್ಸುಕತೆ ಹೆಚ್ಚಾಗಿದೆ.

ಮೈದಾನದ ಅಭಿವೃದ್ಧಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಲಿದ್ದಾರೆ ಮತ್ತು ಅಂದಾಜು ಪಟ್ಟಿಯಲ್ಲಿ ಯಾವೆಲ್ಲ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಆಗ್ರಹ ಹೆಚ್ಚಾಗಿದೆ.

ಸರ್ಕಾರದ ಬೃಹತ್ ಮೊತ್ತದ ಅನುದಾನ ಬಳಸಿ ಸ್ಥಳೀಯ ಕ್ರೀಡಾಪಟುಗಳಿಗೆ ಅಗತ್ಯವಾದ ಅಭಿವೃದ್ಧಿ ನಡೆಸಬೇಕೇ ಹೊರತು ಇಲಾಖೆ ತಮಗೆ ತೋಚಿದಂತೆ ಕೆಲಸಗಳನ್ನು ನಡೆಸಿದಲ್ಲಿ ಇದರಿಂದ ಕ್ರೀಡಾಳುಗಳಿಗೆ ಯಾವುದೇ ಪ್ರಯೋಜನ ಲಭಿಸದು. ಇದರಿಂದ ಎಲ್ಲ ಯೋಜನೆ ನಿಷ್ಪ್ರಯೋಜಕವಾಗಲಿದೆ. ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡುವ ಮೊದಲೇ ಸ್ಥಳೀಯರನ್ನು, ಕ್ರೀಡಾಪಟುಗಳನ್ನು, ವಿವಿಧ ಕ್ಲಬ್ ಸೇರಿದಂತೆ ಕ್ರೀಡಾ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಮೈದಾನದ ಸರಿಯಾದ ಅಭಿವೃದ್ಧಿ ಸಾಧ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಮೂಲಸೌಕರ್ಯ ಅಗತ್ಯ: ಪ್ರಸಕ್ತ ಬಜಕೂಡ್ಲು ಮಿನಿ ಸ್ಟೇಡಿಯಂ ಫುಟ್‌ಬಾಲ್ ಆಟದ ಮೈದಾನದಂತಿದ್ದು, ಇದೇ ಮೈದಾನವನ್ನು ಅನಿವಾರ್ಯವಾಗಿ ಕ್ರಿಕೆಟ್ ಆಟಕ್ಕಾಗಿ ಉಪಯೋಗಿಸುತ್ತಿದ್ದಾರೆ. ಈ ಮೈದಾನವನ್ನು ಕ್ರಿಕೆಟ್ ಆಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಗಲ ಹೆಚ್ಚಿಸುವುದು ಪ್ರಮುಖ ಬೇಡಿಕೆ. ಪಂದ್ಯಾಟ ನಡೆಯುವ ವೇಳೆ ಮೈದಾನಕ್ಕೆ ಆಗಮಿಸುವ ಆಟಗಾರರ ವಾಹನಗಳನ್ನು ನಿಲುಗಡೆಗೊಳಿಸಲು ಸೂಕ್ತ ಪಾರ್ಕಿಗ್ ವ್ಯವಸ್ಥೆ ಇಲ್ಲದೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಹಾಗೂ ಬಜಕೂಡ್ಲು, ಪಳ್ಳಕ್ಕಾನ ಭಾಗಕ್ಕೆ ತೆರಳುವ ರಸ್ತೆಗೆ ತಡೆಯಾಗುವ ರೀತಿಯಲ್ಲಿ ವಾಹನ ಪಾರ್ಕಿಂಗ್ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯರ ಸಂಚಾರಕ್ಕೂ ಸಮಸ್ಯೆಯುಂಟಾಗುತ್ತಿದೆ. ಇನ್ನು ಮಳೆಗಾಲದಲ್ಲಿ ಮೈದಾನದಲ್ಲಿ ನೀರು ದಾಸ್ತಾನುಗೊಳ್ಳದಂತೆ ಸೂಕ್ತ ರೀತಿಯಲ್ಲಿ ಡ್ರೈನೇಜ್ ವ್ಯವಸ್ಥೆ, ಮೈದಾನದ ಸುತ್ತು ಬೆಳಕಿನ ವ್ಯವಸ್ಥೆ ಆಗಬೇಕಾಗಿದೆ. ಈಗಾಗಲೇ ಮಿನಿ ಸ್ಟೇಡಿಯಂನಲ್ಲಿ ಶೌಚಗೃಹ ಹಾಗೂ ನೀರಿಗಾಗಿ ಕೊಳವೆಬಾವಿ ನಿರ್ಮಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಹಣ ಮೀಸಲಿರಿಸದೆ ಇದಕ್ಕೆ ನೀರಿನ ಟ್ಯಾಂಕ್ ಅಳವಡಿಸುವುದರ ಜತೆಗೆ ಶೌಚಗೃಹವನ್ನು ಅಭಿವೃದ್ಧಿಗೊಳಿಸುವುದು ಉತ್ತಮ. ಪ್ರೇಕ್ಷಕರಿಗಾಗಿ ಗ್ಯಾಲರಿ ನಿರ್ಮಿಸುವ ಸಂದರ್ಭ ಅಸ್ತಿತ್ವದಲ್ಲಿರುವ ಗ್ಯಾಲರಿಯ ಉದ್ದ ಹಾಗೂ ಅಗಲ ಹೆಚ್ಚಿಸುವುದರ ಜತೆಗೆ ಮೇಲ್ಛಾವಣಿ ನಿರ್ಮಿಸಿಕೊಡುವುದು ಕ್ರೀಡಾಪಟುಗಳ ಬೇಡಿಕೆಯಾಗಿದೆ. ಮೈದಾನದ ಅಗಲ ಕಡಿಮೆಯಾದಲ್ಲಿ ಕ್ರಿಕೆಟ್ ಆಟಕ್ಕೆ ಸಮಸ್ಯೆಯುಂಟಾಗಲಿದೆ. ಕ್ರಿಕೆಟ್ ಜತೆಗೆ ವಾಲಿಬಾಲ್, ಫುಟ್ಬಾಲ್ ಆಟಗಳಿಗೆ ಅಗತ್ಯವಿರುವ ಕಂಬಗಳ ಅಳವಡಿಕೆ, ಕಬಡ್ಡಿ ಆಟಕ್ಕೆ ಅನುಗುಣವಾದ ಮ್ಯಾಟ್ ವ್ಯವಸ್ಥೆ, ಪ್ಲಾಸ್ಟಿಕ್ ಹಾಗೂ ಇತರ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಬೃಹತ್ ಮೊತ್ತ ಬಳಸಿ ನಿರ್ಮಾಣವಾಗಲಿರುವ ಕ್ರೀಡಾಂಗಣ ಎಲ್ಲ ಕ್ರೀಡಾಳುಗಳಿಗೆ ಪ್ರಯೋಜನಪ್ರದವಾಗುವ ರೀತಿಯಲ್ಲಿ ಕಾಮಗಾರಿ ನಡೆಸುವ ವಿಚಾರದ ಬಗ್ಗೆ ಸ್ಥಳೀಯ ಸಂಘ ಸಂಸ್ಥೆ ಪ್ರತಿನಿಧಿಗಳು, ಕ್ರೀಡಾಪಟುಗಳು ಹಾಗೂ ಸ್ಥಳೀಯರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಹೆಚ್ಚು ಸೂಕ್ತ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಸರ್ಕಾರದ ಅನುದಾನ ಪೋಲಾಗದಂತೆ ನೋಡಿಕೊಳ್ಳಬೇಕು. ಪದ್ಮನಾಭ ಸುವರ್ಣ ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಕ್ರೀಡಾಳುಗಳ ಪ್ರಯೋಜನಕ್ಕಾಗಿ ಕ್ರೀಡಾಂಗಣ ಅಭಿವೃದ್ಧಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯರ, ಕ್ರೀಡಾಪಟುಗಳ ಹಾಗೂ ಕ್ಲಬ್‌ಗಳ ಅಭಿಪ್ರಾಯ ಪಡೆದು, ಸರ್ಕಾರದ ಮಾನದಂಡವನ್ನೂ ಪಾಲಿಸಿಕೊಂಡು ಕಾಮಗಾರಿ ನಡೆಸಲಾಗುವುದು. ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಮುಂದುವರಿಯಲಾಗುವುದು. ಸೋಮಶೇಖರ ಜೆ.ಎಸ್., ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net