ಕರ್ಣಾಟಕ ಬ್ಯಾಂಕ್ ಜತೆ ಬಜಾಜ್ ಅಲಿಯಾನ್ಸ್ ಇನ್ಶುರೆನ್ಸ್ ಕಂಪನಿ ಜೀವವಿಮಾ ಒಡಂಬಡಿಕೆ, ಗ್ರಾಹಕರ ವೈವಿಧ್ಯಮಯ ಹಣಕಾಸು ಅಗತ್ಯ ಪೂರೈಸುವಲ್ಲಿ ಅನುಕೂಲ

K bank
ಕರ್ಣಾಟಕ ಬ್ಯಾಂಕ್-ಬಜಾಜ್ ಅಲಿಯಾನ್ಸ್ ಇನ್ಶುರೆನ್ಸ್ ಕಂಪನಿ ಒಡಂಬಡಿಕೆ ಸಂದರ್ಭ ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್, ಬಜಾಜ್ ಅಲಿಯಾನ್ಸ್ ಲೈಫ್ ಇನ್ಶ್ಶುರೆನ್ಸ್‌ನ ಎಂಡಿ ಮತ್ತು ಸಿಇಒ ತರುಣ್ ಚುಗ್ ಉಪಸ್ಥಿತರಿದ್ದರು.
Published on

ಮಂಗಳೂರು: ಕರ್ಣಾಟಕ ಬ್ಯಾಂಕ್ ಗ್ರಾಹಕರಿಗೆ ಜೀವವಿಮಾ ಉತ್ಪನ್ನಗಳನ್ನು ವಿತರಿಸಲು ಭಾರತದ ಪ್ರಮುಖ ಜೀವವಿಮಾ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದೆ.

ಗ್ರಾಹಕರ ವೈವಿಧ್ಯಮಯ ಹಣಕಾಸು ಅಗತ್ಯಗಳನ್ನು ಪೂರೈಸುವಲ್ಲಿ ಈ ಒಡಂಬಡಿಕೆಯಿಂದ ಅನುಕೂಲವಾಗಲಿದೆ. ಈ ಸಹಯೋಗವು ಆರ್ಥಿಕ ಭದ್ರತೆ ಮತ್ತು ಜೀವರಕ್ಷಣಾ ವಿಮೆಯನ್ನು ಬಯಸುವ ಕರ್ಣಾಟಕ ಬ್ಯಾಂಕ್‌ನ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಗ್ರಾಹಕರಿಗೆ ನವೀನ ಮತ್ತು ಗ್ರಾಹಕ ಕೇಂದ್ರಿತ ಜೀವವಿಮಾ ಉತ್ಪನ್ನಗಳನ್ನು ವಿತರಿಸಲು ಇದರಿಂದ ಅನುಕೂಲವಾಗಲಿದೆ.

ಹೊಸ ಒಡಂಬಡಿಕೆಯ ಕುರಿತು ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್ ಮಾತನಾಡಿ, ನಮ್ಮ ಗ್ರಾಹಕರ ಹಣಕಾಸು ಸ್ಥಿತಿಗತಿ, ಹೂಡಿಕೆ ಮತ್ತು ಜೀವವಿಮಾ ಅಗತ್ಯಗಳು ವಿಕಸನಗೊಳ್ಳುತ್ತಿವೆ. ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ಸಮರ್ಪಕ ಹಣಕಾಸು ಉತ್ಪನ್ನಗಳು ಮತ್ತು ಅವಕಾಶಗಳನ್ನು ನೀಡುವಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬದ್ಧತೆಗೆ ಅನುಗುಣವಾಗಿ, ನಾವು ಬಜಾಜ್ ಅಲಿಯಾನ್ಸ್ ಲೈಫ್ ಜತೆ ಪಾಲುದಾರಿಕೆ ಹೊಂದಿದ್ದೇವೆ. ದೇಶಾದ್ಯಂತದ ಗ್ರಾಹಕರು ಅವರ ಅಗತ್ಯಗಳಿಗೆ ಅನುಗುಣವಾದ ಜೀವವಿಮೆಯನ್ನು ಅವರಿಗೆ ಲಭ್ಯವಿರುವ ಹಣಕಾಸು ಪರಿಧಿಯಲ್ಲಿ ಆಯ್ಕೆ ಮಾಡಿಕೊಳ್ಳಲು ಈ ಒಪ್ಪಂದ ಸಹಾಯವಾಗಲಿದೆ ಎಂದು ಹೇಳಿದರು.

ಬ್ಯಾಂಕ್‌ನ ಇಡಿ ಶೇಖರ್ ರಾವ್ ಮಾತನಾಡಿ ‘ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಕಂಪನಿಯೊಂದಿಗೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ. ಈ ಒಡಂಬಡಿಕೆ ಗ್ರಾಹಕಸ್ನೇಹಿ ಆಗಿದೆ. ಎಲ್ಲ ವಿಧದ ಗ್ರಾಹಕರನ್ನು ತಲುಪುವಲ್ಲಿ ಇದು ಬ್ಯಾಂಕಿಗೆ ಸಹಕಾರಿಯಾಗಿದೆ. ಡಿಜಿಟಲ್ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಮ್ಮ ಗ್ರಾಹಕರು ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಬಲಪಡಿಸುವಲ್ಲಿ ನಾವು ಸದಾ ಬದ್ಧರಾಗಿದ್ದೇವೆ ಎಂದರು.

ಆರ್ಥಿಕ ಸಬಲೀಕರಣಕ್ಕೆ ಅನುವು

ಪಾಲುದಾರಿಕೆಯ ಕುರಿತು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್‌ನ ಎಂಡಿ ಮತ್ತು ಸಿಇಒ ತರುಣ್ ಚುಗ್ ಮಾತನಾಡಿ ‘ಜೀವ ವಿಮೆಯು ಇಂದಿನ ಅತಿ ಅವಶ್ಯಕ ಆರ್ಥಿಕ ಅವಕಾಶವಾಗಿದ್ದು, ಇದು ಗ್ರಾಹಕರಿಗೆ ತಮ್ಮ ದೀರ್ಘಾವಧಿಯ ಗುರಿಗಳನ್ನು ವ್ಯಾಪಕ ಹೂಡಿಕೆ ಆಯ್ಕೆಗಳ ಮೂಲಕ ತಲುಪಲು ಸಹಾಯ ಮಾಡುತ್ತದೆ. ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನೊಂದಿಗಿನ ಸಹಭಾಗಿತ್ವವು ನಮ್ಮ ಸಂಸ್ಥೆಯ ಮಹತ್ವದ ಮೈಲಿಗಲ್ಲಾಗಿದೆ. ಈ ಪಾಲುದಾರಿಕೆಯು ಗ್ರಾಹಕರ ಆರ್ಥಿಕ ಆಶೋತ್ತರಗಳನ್ನು ಪೂರೈಸಲು ಮತ್ತು ಅವರ ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net