

ಪುತ್ತೂರು ಗ್ರಾಮಾಂತರ : ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಯಾರಿಂದಲೂ ನಯಾ ಪೈಸೆ ಲಂಚ ಪಡೆಯಬಾರದು ಎಂದು ಈಗಾಗಲೇ ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡಿದ್ದೇನೆ. ಆದರೂ ಕೆಲವೆಡೆ ಬ್ರೋಕರ್‌ಗಳ ಮೂಲಕ ಹಣ ಸಂದಾಯವಾಗುತ್ತಿರುವ ಬಗ್ಗೆ, ಕೆಲವರು ಕದ್ದುಮುಚ್ಚಿ ಲಂಚ ನೀಡುತ್ತಿರುವ ಕುರಿತು ಮಾಹಿತಿ ಲಭಿಸಿದೆ. ಹಣ ಪಡೆದುಕೊಂಡಿರುವುದು ಸಾಬೀತಾದರೆ ಅಂಥವರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ ಎಂದು ಶಾಸಕ ಅಶೋಕ್‌ಕುಮಾರ್ ರೈ ಎಚ್ಚರಿಸಿದರು.
ಕೆಯ್ಯೂರಿನಲ್ಲಿ ಮಂಗಳವಾರ ಪುತ್ತೂರು ವಿಧಾನಸಭಾ ಕ್ಷೇತ್ರದ 11ನೇ ಅಕ್ರಮ-ಸಕ್ರಮ ಬೈಠಕ್‌ನಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ನಾಲ್ಕು ಗೋಡೆಗಳ ನಡುವೆ ನಡೆಯುತ್ತಿದ್ದ ಅಕ್ರಮ-ಸಕ್ರಮ ಬೈಠಕ್ ಈಗ ಗ್ರಾಮಸ್ಥರ ಮನೆ ಬಾಗಿಲಿನಲ್ಲಿ ನಡೆಯುತ್ತಿದೆ. ಪಾರದರ್ಶಕವಾಗಿ ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರ ಕಡತ ವಿಲೇವಾರಿ ಮಾಡಲಾಗುತ್ತಿದೆ ಎಂದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಮುಂದೆ ಪ್ರತಿ ಮಂಗಳವಾರ ಅಕ್ರಮ-ಸಕ್ರಮ ಬೈಠಕ್ ನಡೆಯಲಿದ್ದು, ಗ್ರಾಮಸ್ಥರ ಕಡತ ವಿಲೇವಾರಿಯಾಗಲಿದೆ ಎಂದರು.
ಬೈಠಕ್‌ನಲ್ಲಿ 60 ಮಂದಿಗೆ ಅಕ್ರಮ-ಸಕ್ರಮ, 20 ಮಂದಿಗೆ 94ಸಿ ಹಕ್ಕುಪತ್ರ ವಿತರಿಸಲಾಯಿತು. ತಹಸೀಲ್ದಾರ್ ಪುರಂದರ ಹೆಗ್ಡೆ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಅಶೋಕ್ ರೈ ಶಾಸಕರಾಗಿ ಇದ್ದರೆ ಮಾತ್ರ ಪುತ್ತೂರು ಜಿಲ್ಲೆಯಾಗಲು ಸಾಧ್ಯ. ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ರಾಜ್ಯದಲ್ಲಿ ಯಾವ ಶಾಸಕರೂ ಮಾಡದ ಸಾಧನೆ ಮಾಡುತ್ತಿದ್ದಾರೆ. ಮೆಡಿಕಲ್ ಕಾಲೇಜು ತರುವುದು ಸುಲಭದ ಕೆಲಸವಲ್ಲ. ಅಕ್ರಮ-ಸಕ್ರಮ ಪುತ್ತೂರು ಬಿಟ್ಟರೆ ಬೇರೆಲ್ಲೂ ಈ ಮಟ್ಟದಲ್ಲಿ ನಡೆದಿಲ್ಲ. ಪುರಂದರ ಹೆಗ್ಡೆ, ತಹಸೀಲ್ದಾರ್