

ಮುಳಬಾಗಿಲು; ತಾಲೂಕಿನ ಬೈರಕೂರು ಗ್ರಾಮ ಪಂಚಾಯಿತಿಯಿಂದ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡಿದ್ದು, ಸಂಗ್ರಹಗೊಂಡ ಕಸವನ್ನು ಗ್ರಾಮದ ಕೆರೆ ಅಂಗಳಕ್ಕೆ ಸುರಿಯಲಾಗುತ್ತಿದೆ.
ಸ್ವಚ್ಛತೆಯ ನೆಪದಲ್ಲಿ ಗ್ರಾಮವನ್ನು ಶುಚಿಗೊಳಿಸಿದರಾದರೂ ಗ್ರಾಮದ ಕೆರೆ ಅಂಗಳವನ್ನು ಮಲೀನಗೊಳಿಸಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು. ಕಸ ಸಾಗಣೆ ಮಾಡುತ್ತಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಕೆರೆಗಳು ಜಲಮೂಲಗಳ ಜೀವ ಸೆಲೆಗಳಾಗಿದ್ದು, ಇವುಗಳನ್ನು ರಕ್ಷಿಸಬೇಕಾದ ಸ್ಥಳಿಯ ಸಂಸ್ಥೆಗಳೇ ಈ ರೀತಿ ನಡೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಬೈರಕೂರು ಹೋಬಳಿ ಕೇಂದ್ರವಾಗಿದೆ. ದೊಡ್ಡ ಗ್ರಾಮವಾಗಿರುವ ಕಾರಣ ರಸ್ತೆಬದಿ ಬೆಳೆದಿರುವ ಗಿಡ&ಗಂಟಿಗಳು, ಹುಲ್ಲು ಮತ್ತಿತರ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ತಕ್ಷಣಕ್ಕೆ ಕೆರೆಯಲ್ಲಿ ಹಾಕಲಾಗಿದೆ. ದೂರದ ಗುಡಿಪಲ್ಲಿ ರಸ್ತೆಯಲ್ಲಿರುವ ಡಂಪಿಂಗ್ ಯಾರ್ಡ್ಗೆ ಸಾಗಿಸಲು ಸೂಚನೆ ನೀಡಲಾಗಿತ್ತು. ವಿರೋಧ ವ್ಯಕ್ತವಾಗುತ್ತಿದಂತೆ ಅಲ್ಲಿಗೆ ಸಾಗಿಸಲಾಗಿದೆ. ಕೆರೆಯಲ್ಲಿರುವ ಎರಡು ಲೋಡ್ ಕಸವನ್ನು ನಾಳೆ ಡಂಪಿಂಗ್ ಯಾರ್ಡ್ಗೆ ಸಾಗಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಡೇನಹಳ್ಳಿ ಅಶೋಕ್ ಮತ್ತು ಪಿಡಿಒ ಚಂದ್ರಶೇಖರ್ ಸ್ಪಷ್ಟಪಡಿಸಿದರು.