

ಕುಂದಾಪುರ: ಕರೊನಾ ಹೊಡೆತದಿಂದ ಪಾಲಕರು ಶಾಲಾ ಶುಲ್ಕ ಕಟ್ಟಲಾಗದೆ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಕುಂದಾಪುರ ಎಜುಕೇಷನ್ ಪ್ರವರ್ತಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ರೂ. ಶುಲ್ಕವನ್ನು ಮನ್ನಾ ಮಾಡುವ ಮೂಲಕ ಮಕ್ಕಳ ನೆರವಿಗೆ ಬಂದಿದ್ದಾರೆ.
ಎಲ್ಕೆಜಿಯಿಂದ ಪದವಿವರೆಗೆ ಶಿಕ್ಷಣ ನೀಡುವ ವಿಕೆಆರ್ ಆಚಾರ್ಯ ಮೆಮೊರಿಯಲ್ ಸ್ಕೂಲ್, ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಆರ್.ಎನ್.ಶೆಟ್ಟಿ ಪಿಯು ಕಾಲೇಜು ಮತ್ತು ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಈ ಬಾರಿ ಪರೀಕ್ಷೆ ನಡೆಯದಿರುವುದರಿಂದ ಸುಮಾರು 1.50 ಕೋಟಿ ರೂ. ಶುಲ್ಕ ಬಾಕಿ ಉಳಿದಿದ್ದು, ಬಡವರಿಂದ ಬಾಕಿ ಶುಲ್ಕ ಪಡೆಯದಿರಲು ನಿರ್ಧರಿಸಲಾಗಿದೆ.
ಅನಾಥರಿಗೆ ಉಚಿತ, ಕೆಲ ಕುಟುಂಬಗಳಿಂದ ಅರ್ಧ ಶುಲ್ಕ, ಶ್ರೀಮಂತರಿಂದ ಪೂರ್ಣ ಶುಲ್ಕ ಪಡೆಯಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.