

ಬೆಳಗಾವಿ : 'ಕೇಂದ್ರ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಬಸ್ ನಿಲ್ದಾಣದ ಒಳಗಡೆ ಆಟೊ ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡಲಾಗುವುದು' ಎಂದು ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ರವಿ ನಾಯಕ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆ ಕುರಿತು ವ್ಯಾಪಾರಸ್ಥರು, ಸಾರ್ವಜನಿಕರೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಹತೋಟಿಗೆ ವ್ಯಾಪಾರಸ್ಥರ, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಬಸ್ ನಿಲ್ದಾಣ ಎದುರು ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುವುದು, ಆಟೊ ನಿಲ್ಲಿಸಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡಬಾರದು. ವಿನಾಕಾರಣ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟು ಮಾಡಿದರೆ ಶಿಸ್ತು ಕ್ರಮ ಕೈಕೊಳ್ಳಲಾಗುವುದು’ ಎಂದರು.
ಸಿಪಿಐ ಪಂಚಾಕ್ಷರಿ ಸಾಲಿಮಠ ಮಾತನಾಡಿ, ‘ರಸ್ತೆ ಮೇಲೆ ಆಟೊ, ತಳ್ಳುವ ಗಾಡಿ ಹಚ್ಚುತ್ತಿರುವುದರಿಂದ ಸಂಚಾರ ಸಮಸ್ಯೆ ಆಗುತ್ತಿರುವುದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಪಾದಚಾರಿಗಳ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡಿದರೆ ಅಂತವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು’ ಎಂದರು. ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಸಿಬ್ಬಂದಿ ಇದ್ದರು.