

ಬೆಳಗಾವಿ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳಲ್ಲಿ ಮಾರಾಮಾರಿ ನಡೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿರುದ್ಧ ದೂರು ದಾಖಲಾಗಿದೆ.
ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಜಮೀನು ವಿವಾದ ಹಾಗೂ ಸಾಗುವಾನಿ ಮರಗಳನ್ನು ಕತ್ತರಿಸಿದ ಕಾರಣಕ್ಕೆ ಮನೆಗೆ ನುಗ್ಗಿ ಬಡೆದಾಡಿದ ಘಟನೆ ಮೇ.23ರಂದು ಸಂಭವಿಸಿದೆ. ಹಲ್ಲೆಗೊಳಗಾದ ಕುಟುಂಬದ ಯುವಕ ತನ್ನ ಮೊಬೈಲ್‌ನಲ್ಲಿ ವಿಡಿಯೊ ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ.
ಮಹಾರುದ್ರಪ್ಪ ಕುಂಬಾರ ಹಾಗೂ ಶಂಕರೆಪ್ಪ ಕುಂಬಾರ ಕುಟುಂಬಗಳ ಮಧ್ಯೆ ದೊಣ್ಣೆ ಗಳಿಂದ ಹೊಡೆದಾಡಿಕೊಂಡಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶಂಕರೆಪ್ಪ ಕುಂಬಾರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಅದೇ ಜಮೀನಿನಲ್ಲಿ ಬೆಳೆದಿದ್ದ ಸಾಗವಾನಿ ಮರಗಳನ್ನು ತುಂಡರಿಸಿ, ತೆಗೆದುಕೊಂಡು ಹೋಗಲು ಬಂದಾಗ ಎರಡೂ ಕುಟುಂಬಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಕೈ ಮೀರಿ ಮಾರಣಾಂತಿಕ ಹಲ್ಲೆ ನಡೆದಿದೆ.
ಮಾರಾಮಾರಿಯಲ್ಲಿ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದು, ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.