ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ ಕೇಸ್​​​​​ನಲ್ಲಿ ಪತ್ನಿಗೆ ಜಾಮೀನು ಮಂಜೂರು

court
Published on

ಬೆಂಗಳೂರು: ಪ್ರಿಯತಮನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಲು ಅಡಚಣೆಯಾಗಿರುವ ಕಾರಣಕ್ಕೆ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಯೊಬ್ಬರಿಗೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್​ಪಿಸಿ) 1973ರ ಸೆನ್​ 437(1) ಪರಿಗಣಿಸಿ ಹೈಕೋರ್ಟ್​ ಜಾಮೀನು ನೀಡಿದೆ.

ಗಲ್ಲು, ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವ ಆರೋಪಿ ಮಹಿಳೆಯಾಗಿದ್ದರೆ, ಆಕೆಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಸಿಆರ್​ಪಿಸಿ ಸೆನ್​ 437(1)ನಲ್ಲಿ ಅವಕಾಶವಿದೆ. ಈ ನಿಯಮವನ್ನು ಪರಿಗಣಿಸಿರುವ ಹೈಕೋರ್ಟ್​, ಪತಿಯ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಕುಣಿಗಲ್​ ನಿವಾಸಿ ಹರ್ಷಿತಾಗೆ ಜಾಮೀನು ನೀಡಿ ಹೈಕೋರ್ಟ್​ ಆದೇಶಿಸಿದೆ. ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಹರ್ಷಿತಾ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್​ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್​.ವಿಶ್ವಜಿತ್​ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರೆ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್​, ಅಷ್ಟೆ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು. ಪ್ರಕರಣದ ಸಾಗಳಿಗೆ ಬೆದರಿಕೆ ಹಾಕಬಾರದು. ಸ್ಯಾಧಾರ ತಿರುಚಲು ಯತ್ನಿಸಬಾರದು. ಇದೇ ಮಾದರಿಯ ಅಪರಾಧಗಳಲ್ಲಿ ಭಾಗಿಯಾಗಬಾರದು ಎಂದು ನ್ಯಾಯಪೀಠ ಜಾಮೀನು ಮಂಜೂರಾತಿಗೆ ಅರ್ಜಿದಾರೆಗೆ ಷರತ್ತು ವಿಧಿಸಿದೆ.

ಪ್ರಕರಣವೇನು?

ಅರ್ಜಿದಾರೆ ಮಂಜುನಾಥ್​ ಎಂಬಾತನನ್ನು ಮದುವೆಯಾಗಿದ್ದರು. ಅರ್ಜಿದಾರೆ ಮದುವೆ ಮುನ್ನವೇ ಮತ್ತೋರ್ವನೊಂದಿಗೆ (ಪ್ರಕರಣದ ಮೊದಲನೆ ಆರೋಪಿ) ಸಂಬಂಧ ಹೊಂದಿದ್ದು, ಅದು ಮುದುವೆ ನಂತರವೂ ಮುಂದುವರೆದಿತ್ತು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಕಾರಣಕ್ಕೆ ಪತಿ ಮಂಜುನಾಥ್​ ಕೊಲೆಗೆ ಪ್ರಿಯತಮನಾದ ಮೊದಲನೆ ಆರೋಪಿಯೊಂದಿಗೆ ಅರ್ಜಿದಾರೆ ಪಿತೂರಿ ಹೂಡಿದ್ದರು. ಅದರಂತೆ, ಮೊದಲನೆ ಆರೋಪಿ ಮಂಜುನಾಥ್​ ಕೊಲೆಗೆ ಇತರೆ ಐವರು ಆರೋಪಿಗೆ ಸುಪಾರಿ ನೀಡಿ, 50 ಸಾವಿರ ಪಾವತಿಸಿದ್ದರು. 2023ರ ಫೆ.3ರಂದು ಐವರು ಆರೋಪಿಗಳು ಅರ್ಜಿದಾರೆ ಮನೆಗೆ ಬಂದಿದ್ದರು. ಆಕೆಯ ಬಾಗಿಲು ತೆರೆದು, ಪತಿ ಮಲಗಿರುವ ಕೊಣೆ ತೋರಿಸಿದ್ದರು. ಐವರು ಆರೋಪಿಗಳು ರಾಡ್​ನಿಂದ ಹೊಡೆದು ಮಂಜುನಾಥ್​ ತಲೆ ಹೊಡೆದು ಸಾಯಿಸಿದ್ದರು. ನಂತರ ಮೃತದೇಹವನ್ನು ಸಾಗಿಸಿ ಕೆರೆಯ ಪಕ್ಕದಲ್ಲಿ ಬಿಸಾಡಿದ್ದರು ಎಂಬ ಆರೋಪವಿತ್ತು. ಈ ಕುರಿತು ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಿದ್ದ ಕುಣಿಗಲ್​ ಠಾಣಾ ಪೊಲೀಸರು ಅರ್ಜಿದಾರೆ, ಆತನ ಪ್ರಿಯತಮ ಮತ್ತು ಇತರೆ ಐವರು ಆರೋಪಿಗಳನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅರ್ಜಿದಾರೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net