ಹೆದ್ದಾರಿ ಹೊಂಡಕ್ಕೆ ಸ್ಕೂಟರ್ ಸವಾರ ಬಲಿ ಗುಂಡಿ ತಪ್ಪಿಸಲೆತ್ನಿಸಿದ ಸಂದರ್ಭ ಹಿಂದಿನಿಂದ ಲಾರಿ ಡಿಕ್ಕಿ

peter
Published on


ಮಂಗಳೂರು: ಬೈಕಂಪಾಡಿ-ಪಣಂಬೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆ ಬೃಹತ್ ಹೊಂಡ ಬಿದ್ದಿದ್ದು, ದ್ವಿಚಕ್ರ ಸವಾರರ ಪ್ರಾಣಕ್ಕೆ ಎರವಾಗುತ್ತಿದೆ. ಪಣಂಬೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸ್ಕೂಟರ್ ಸವಾರರೊಬ್ಬರು ಹೊಂಡ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.


ಕೆಂಜಾರು ನಿವಾಸಿ ಟೈಟಸ್ ಫೆರಾವೋ(69) ಮೃತಪಟ್ಟವರು. ಅವರು ಸ್ಕೂಟರ್‌ನಲ್ಲಿ ಪಣಂಬೂರು ಕಡೆಗೆ ತೆರಳುತ್ತಿದ್ದಾಗ ನಡುರಸ್ತೆಯಲ್ಲಿ ಹೊಂಡ ಇದ್ದ ಕಾರಣ ದಿಢೀರ್ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸರಕು ತುಂಬಿದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಲಾರಿ ವೇಗವಾಗಿದ್ದುದರಿಂದ ಸ್ಕೂಟರ್ ಮತ್ತು ಸವಾರನನ್ನು ಸುಮಾರು 100 ಮೀಟರ್ ದೂರಕ್ಕೆ ಎಳೆದುಕೊಂಡು ಹೋಗಿದೆ. ಗಂಭೀರ ಗಾಯಗೊಂಡ ಟೈಟಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಈರಣ್ಣ ವಿರುದ್ಧ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದ್ವಿಚಕ್ರ ಸವಾರರಿಗೆ ಸಂಚಕಾರ
ಬೈಕಂಪಾಡಿಯಿಂದ ಪಣಂಬೂರು ತನಕ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳಾಗಿದ್ದು, ಮಳೆ ನೀರು ತುಂಬಿರುವಾಗ ಗಮನಕ್ಕೆ ಬರುವುದಿಲ್ಲ. ದ್ವಿಚಕ್ರ ವಾಹನ ಸವಾರರಿಗೆ ಈ ಹೊಂಡಗಳು ಅಪಾಯಕಾರಿಯಾಗಿದ್ದು, ಹೊಂಡಗಳಿಗೆ ಬಿದ್ದು ಸ್ಕಿಡ್ ಆಗಿ ಹಿಂಬದಿಯಿಂದ ಬರುವ ವಾಹನಗಳ ಅಡಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಭಾಗದಲ್ಲಿ ಬೀದಿದೀಪಗಳು ಕೂಡಾ ಉರಿಯುತ್ತಿಲ್ಲ.

ಕೂಳೂರಿನಲ್ಲಿ ಪ್ರತಿಭಟನೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿರುವ ಹೊಂಡಗಳನ್ನು ಮುಚ್ಚುವಂತೆ ನಾಗರಿಕ ಹಿತರಕ್ಷಣಾ ಸಮಿತಿ ಮಂಗಳವಾರ ಕೂಳೂರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಒತ್ತಾಯಿಸಿದೆ. ಇದೇ ಸಂದರ್ಭ ಅನತಿ ದೂರದಲ್ಲೇ ಸ್ಕೂಟರ್ ಸವಾರ ಹೆದ್ದಾರಿ ಗುಂಡಿಗೆ ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದಷ್ಟು ಬೇಗ ಹೊಂಡ ಮುಚ್ಚುವ ಮೂಲಕ ಬಲಿಯಾಗುವ ಅಮಾಯಕ ಜೀವಗಳಿಗೆ ರಕ್ಷಣೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net