ಬೈಕಂಪಾಡಿಯಲ್ಲಿ ವ್ಯಾಪಾರ ಆರಂಭ

baikammmm
Published on

ಸುರತ್ಕಲ್: ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸಗಟು ತರಕಾರಿ ಹಾಗೂ ಹಣ್ಣು ವ್ಯಾಪಾರಿಗಳು ಬುಧವಾರ ಸ್ಥಳಾಂತರಗೊಂಡು ವ್ಯಾಪಾರ ಆರಂಭಿಸಿದ್ದಾರೆ.

ಮೊದಲ ದಿನ 76 ಹಣ್ಣು, ತರಕಾರಿ ಲಾರಿಗಳು ಆಗಮಿಸಿವೆ. ನಾಳೆಯಿಂದ ಮತ್ತಷ್ಟು ತರಕಾರಿ ಹಾಗೂ ಹಣ್ಣುಗಳ ವಾಹನಗಳು ಆಗಮಿಸುವ ನಿರೀಕ್ಷೆಯಿದೆ. ಕೇಂದ್ರ ಮಾರುಕಟ್ಟೆಯ ಶೇ.50ರಷ್ಟು ಸಗಟು ವ್ಯಾಪಾರಿಗಳು ಬೈಕಂಪಾಡಿಗೆ ಸ್ಥಳಾಂತರಗೊಂಡಿದ್ದಾರೆ. ಈ ಮೂಲಕ ವ್ಯಾಪಾರಿಗಳು ಹಾಗೂ ಜಿಲ್ಲಾಡಳಿತ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಜಗ್ಗಾಟಕ್ಕೆ ಕೊನೆ ಬಿದ್ದಿದೆ.

ಸ್ಥಳಾಂತರಗೊಂಡವರ ಪೈಕಿ ಪರವಾನಗಿ ಹೊಂದಿದವರು ಹಾಗೂ ಹೊಂದವರೂ ಇದ್ದರು. ಎಲ್ಲರೂ ವ್ಯಾಪಾರ ನಡೆಸಿದ್ದಾರೆ ಎಂದು ಸೆಂಟ್ರಲ್ ಮಾರುಕಟ್ಟೆ ಸಗಟು ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲ್ಯಾನ್ ತಿಳಿಸಿದ್ದಾರೆ. ಕೆಲವು ವ್ಯಾಪಾರಿಗಳು ವ್ಯಾಪಾರವಿಲ್ಲದೆ ಅರ್ಧದಲ್ಲಿಯೇ ಹಿಂತಿರುಗಿದ್ದಾರೆ. ಮಾರಾಟವಾಗದೆ ಉಳಿದ ತರಕಾರಿಗಳನ್ನು ವಾಣಿಜ್ಯ ಕಾಂಪ್ಲೆಕ್ಸ್‌ನಲ್ಲಿ ಶೇಖರಿಸಿಡಲಾಗಿದೆ.

ಹಣ್ಣುಗಳನ್ನು ಗೋದಾಮಿನಲ್ಲಿಡಲಾಗಿದೆ. ಮೊದಲ ದಿನವಾದ ಕಾರಣ ಒಂದಷ್ಟು ಗೊಂದಲ ಉಂಟಾಗಿತ್ತು. ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ವರ್ತಕರಿಂದ ಯಾವುದೇ ದೂರು ಬರದ ಹಾಗೆ ಎಪಿಎಂಸಿ ಕಾರ್ಯನಿರ್ವಹಿಸಲಿದೆ ಎಂದು ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಸ್. ತಿಳಿಸಿದ್ದಾರೆ

ಎಪಿಎಂಸಿ ವಾಣಿಜ್ಯ ಸಮುಚ್ಚಯದ ಹಿಂಬದಿ 36 ತರಕಾರಿ ಅಂಗಡಿ ನಿರ್ಮಿಸಲಾಗುತ್ತಿದೆ. 26 ಹಣ್ಣು ಹಂಪಲು ಅಂಗಡಿ ವರ್ತಕರ ಪೈಕಿ ಐವರಿಗೆ ಗೋದಾಮಿನಲ್ಲಿ ಸ್ಥಳಾವಕಾಶ ಒದಗಿಸಲಾಗಿದೆ. ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಸೌಲಭ್ಯಗಳನ್ನು ಶೀಘ್ರ ಕಲ್ಪಿಸಲಾಗುತ್ತದೆ.

-ಭರತ್ ಶೆಟ್ಟಿ ಶಾಸಕ

ವರ್ತಕರು 15 ದಿನ ಎಷ್ಟು ಹಣ್ಣು, ತರಕಾರಿ ತರಿಸುತ್ತಾರೆ ಎಂಬ ಆಧಾರದಲ್ಲಿ ಅವರಿಗೆ ಮುಂದೆ ಗೋದಾಮು ವಿತರಿಸಲಾಗುವುದು.

-ಕೆ.ಕೃಷ್ಣರಾಜ್ ಹೆಗ್ಡೆ ಮಾಜಿ ಎಪಿಎಂಸಿ ಅಧ್ಯಕ್ಷ

ವ್ಯಾಪಾರಸ್ಥರು ಸಂಯಮದಿಂದ ವರ್ತಿಸಿ, ಆಡಳಿತ ಕಲ್ಪಿಸುವ ಸೌಲಭ್ಯಗಳನ್ನು ಬಳಸಿಕೊಂಡು ತಾಳ್ಮೆಯಿಂದ ವ್ಯಾಪಾರ ಮಾಡಿದರೆ ಎಲ್ಲರಿಗೂ ಅನುಕೂಲ. ಸಮಸ್ಯೆಗಳು ಎದುರಾದಾಗ ಸಂಬಂಧಪಟ್ಟವರ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು.

-ಬದ್ರುದ್ದೀನ್ ಕಲ್ಲಂಗಡಿ ವ್ಯಾಪಾರಿ

ಕಾಮಗಾರಿ ಆರಂಭ: ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಗೃಹ ಮೊದಲಾದ ಮೂಲಸೌಕರ್ಯ ವ್ಯವಸ್ಥೆಗೆ ಬೇಕಾದ ಕಾಮಗಾರಿಗಳು ಆರಂಭಗೊಂಡಿವೆ. ಪ್ರಾಂಗಣದಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕಾರ್ಯ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net