

ಮಡಿಕೇರಿ:
ಕುಂಡೆಹಬ್ಬ ಎನ್ನುವ ದೇವರಿಗೆ ಬೈಯ್ಯುವÀ ವಿಶೇಷ ಹಬ್ಬದ ಮೂಲಕ ಪ್ರತಿ ವರ್ಷ ಸದ್ದು ಮಾಡುವ ಕೊಡಗು ಸೋಮವಾರ ರಾಜ್ಯದಲ್ಲೇ ಪ್ರಥಮ ಬಾರಿಗೆ ವಿಶಿಷ್ಟವಾದ ಬೈಗುಳ ಸಾಹಿತ್ಯೋತ್ಸವಕ್ಕೆ ಸಾಕ್ಷಿಯಾಯಿತು. ಅಲ್ಲಾರಂಡ ರಂಗಚಾವಡಿ ಮತ್ತು ಕೊಡಗು ಸಿರಿಗನ್ನಡ ವೇದಿಕೆ ವತಿಯಿಂದ ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನಡೆದ ಈ ಕಾರ್ಯಕ್ರಮ ಬೈಗುಳದ ಆಳ-ಅಗಲವನ್ನು ಆಸಕ್ತರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ಗಂಭೀರತೆಯ ಲೇಪವಿದ್ದರೆ ಮಾತ್ರ ಸಾಹಿತ್ಯ ಎಂಬ ಪ್ರಮುಖ ಮಾನದಂಡದೊಳಗೆ ಕಥೆ, ಕಾದಂಬರಿ, ನಾಟಕ, ಕಾವ್ಯ, ಹಾಸ್ಯ, ಪ್ರಬಂಧ ಒಳಗೊಂಡು ಸಾಹಿತ್ಯ ಕೃಷಿ ಸಾಮಾನ್ಯ. ಆದರೆ ಬೈಗುಳದಲ್ಲಿಯೂ ಸಾಹಿತ್ಯವನ್ನು ಗುರುತಿಸುವ ಮೂಲಕ ಅದಕ್ಕೊಂದು ಉತ್ಸವದ ರೂಪ ನೀಡಿದ ಹೆಗ್ಗಳಿಕೆ ಅಲ್ಲಾರಂಡ ರಂಗ ಚಾವಡಿಯ ಅಲ್ಲಾರಂಡ ವಿಠಲ ಅವರದ್ದು. ಕೊಡಗಿನ ಭಾಷಾ ವೈವಿಧ್ಯದಲ್ಲಿ ಅಡಕವಾಗಿರುವ ಬೈಗುಳಗಳನ್ನು ಸಂಗ್ರಹಿಸಿ ಅವುಗಳ ಅರ್ಥ ಸÀಹಿತ ಪುಸ್ತಕ ಮುದ್ರಿಸಿ ಕಾರ್ಯಕ್ರಮದಲ್ಲಿ ಬಿಡುಗಡೆಯನ್ನೂ ಮಾಡಲಾಗಿದೆ.
ಬೈಗುಳಗಳೂ ಸಾಹಿತ್ಯ ಆಗುತ್ತದೆಯೇ ಎನ್ನುವ ಜಿಜ್ಞಾಸೆಗಳ ಮಧ್ಯೆ ಬೈಗುಳಗಳ ರೂಪ, ಪ್ರಖರತೆ, ಪರಿಣಾಮ, ಸಿಟ್ಟು, ಸೆಡವಿನ ಚರ್ಚೆಗೂ ಈ ಕಾರ್ಯಕ್ರಮ ವೇದಿಕೆ ಆಯಿತು. ಬೈಗುಳ ಬಳಕೆ ಎಲ್ಲಾ ಕಡೆಯೂ ಸಾಮಾನ್ಯ. ಭಾಷೆಗಳು ಬೇರೆ ಬೇರೆ ಇರಬಹುದು. ಬೈಗುಳವನ್ನು ಹೊರಹಾಕುವುದರ ಹಿಂದಿನ ಆಕ್ರೋಶ, ಅಸಮಾಧಾನ, ಭಾವ, ವೇಶ, ಪದಗಳ ಅರ್ಥದ ಬಹುಭಾಗ ನಿಂದನೆ, ಆಶ್ಲೀಲ ಶಬ್ದ, ಅನಿಷ್ಠದ ಪ್ರಾತಿನಿಧಿಕತೆಯೇ ಆಗಿರುತ್ತದೆ ಎನ್ನುವ ಅಭಿಪ್ರಾಯ ಸಾಹಿತ್ಯೋತ್ಸವದಲ್ಲಿ ನಡೆದ ಚರ್ಚೆಯ ವೇಳೆ ಹೊರಹೊಮ್ಮಿತು.
ಸಾಮಾನ್ಯವಾಗಿ ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಬೈಗುಳದಲ್ಲಿ ಬಳಕೆಯಾಗುವ ಭಾಷೆಯ ಪ್ರಖರತೆ ಕಡಿಮೆ ಇರುತ್ತದೆ. ಸ್ಥಳೀಯವಾಗಿ ಇಲ್ಲಿಯ ಬೈಗುಳ ಭಾಷೆಗಳು ದೊಡ್ಡ ಪರಿಣಾಮ ಬೀರಿದರೆ, ಉತ್ತರ ಕರ್ನಾಟಕ, ಬಯಲು ಸೀಮೆ ಪ್ರದೇಶಗಳಲ್ಲಿ ಬಳಕೆಯಾಗುವ ಭಾಷೆಗಳ ಮುಂದೆ ಇದು ಏನೇನೂ ಅಲ್ಲ. ಬೈಗುಳದ ಸಂದರ್ಭ ‘ನನ್ ಮಗನೇ’ ಎಂದು ಬಳಸಿದ ಶಬ್ದವೊಂದು ಮಾಡಿದ ಅನಾಹುತವನ್ನು ಬೈಗುಳ ಬರಹ ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಸುನಿತಾ ಕುಶಾಲನಗರ ಕಾರ್ಯಕ್ರಮದಲ್ಲಿ ಹಂಚಿಕೊAಡರು.
ಸಿನಿಮಾ, ಟಿವಿ ಧಾರಾವಾಹಿಯಲ್ಲಿನ ಸಂಭಾಷಣೆಗಳು ಜನರ ಜೀವನದ ಮೇಲೆ, ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲು ಆರಂಭಿಸಿದ ನಂತರ ಬೈಗುಳದ ವ್ಯಾಖ್ಯಾನ ಬದಲಾಗಲಾರಂಭಿಸಿದೆ. ಕೆಲವೊಂದು ಬೈಗುಳಗಳು ಆಡುಮಾತಿನ ಸಾಮಾನ್ಯ ಶಬ್ದಗಳೇ ಆಗಿಹೋಗಿವೆ. ತಮಾಷೆಯಾಗಿಯೋ, ಕ್ರೀಡಾಸ್ಫೂರ್ತಿಯಿಂದಲೋ ತೆಗೆದುಕೊಳ್ಳುವುದು ಜಾಸ್ತಿಯಾಗಿದೆ. ಸ್ನೇಹದ ಸೂಚಕವಾಗಿ ಬೈಗುಳದ ಪ್ರಯೋಗವೂ ಸಾಮಾನ್ಯವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಸಿನಿಮಾಲ್ಲಿ ಬಳಕೆಯಾದ ಕರಾವಳಿಯ ಬೈಗುಳಗಳು ಈಗ ಬೈಗುಳ ಅಂತ ಅನ್ನಿಸುತ್ತಲೇ ಇಲ್ಲ ಎನ್ನುವುದು ಹಲವರ ಅಭಿಪ್ರಾಯ.
ಕೊಡಗಿನ ಗ್ರಾಮ್ಯ ಬೈಗುಳಗಳು, ನೇರ ಬೈಗುಳಗಳನ್ನು ಬಳಸಿ ಸಾಹಿತ್ಯದ ಮೆರುಗು ನೀಡಿ ರಚಿಸಿರುವ ‘ಬೈಗುಳ ಬರಹ'À ಪುಸ್ತಕದ ಬಿಡುಗಡೆಯೂ ವಿಶೇಷವಾಗಿ ಗಮನ ಸೆಳೆಯಿತು.
ಜಾನಪದೀಯ ಬೈಗುಳಗಳ ಸಂಗೀತದ ಹಿನ್ನೆಲೆಯಲ್ಲಿ ವೇದಿಕೆಯ ಮೇಲಿನಿಂದ ಪುಟ್ಟ ಬುಟ್ಟಿಯಲ್ಲಿ ಇಳಿದು ಬಂದ ಪುಸ್ತಕವನ್ನು ಸಾಹಿತಿ ಸುನೀತಾ ಕುಶಾಲನಗರ ಬಿಡುಗಡೆ ಮಾಡಿದರು. ಕನ್ನಡ ಬೈಗುಳ ವಿಚಾರದಲ್ಲಿ ಬೆಂಗಳೂರು ವಿವಿಯಿಂದ ೧೯೯೪ರಲ್ಲಿ ಡಾಕ್ಟರೇಟ್ ಪಡೆದ ಕನ್ನಡ ಅಧ್ಯಾಪಕ ಡಾ. ಸಿ.ಪಿ. ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದ್ದು ಮತ್ತೊಂದು ವಿಶೇಷ.
ಕೊಡಗು ಜಿಲ್ಲೆಯಲ್ಲಿ ಬೈಗುಳಕ್ಕೆ ವಿಶೇಷ ಸ್ಥಾನಮಾನ ಇದೆ. ಇಲ್ಲಿನ ಬುಡಕಟ್ಟು ಜನಾಂಗ ಆಚರಿಸುವ ಬೇಡು ಹಬ್ಬದಲ್ಲಿ ದೇವರನ್ನು ಬೈಯುತ್ತ ಕೋಪ ತೀರಿಸಿಕೊಂಡು ಕಾಣಿಕೆ ಸಂಗ್ರಹಿಸಿ ಆನಂತರ ಅದನ್ನು ದೇವರಿಗೆ ಒಪ್ಪಿಸುವ ವಿಶೇಷ ಆಚರಣೆ ಇರುವುದು ಇಡೀ ದೇಶದ ಗಮನ ಸೆಳೆದಿದೆ. ಆಚರಣೆ ಒಂದು ಭಾಗವಾದರೆ ಇಲ್ಲಿನ ಬೈಗುಳಕ್ಕೆ ಜಾನಪದೀಯ ಹಿನ್ನೆಲೆ ಇರುವುದು ಹಬ್ಬದಿಂದ ಸಾಬೀತಾಗುತ್ತಿದೆ. ಇಂಥ ಪ್ರದೇಶದಲ್ಲಿ ಒಂದು ಹೊಸ ಪ್ರಯತ್ನ ನಡೆಸಲಾಗಿದೆ.
ಕುಡೆಕಲ್ ಸಂತೋಷ್, ಕಾರ್ಯಕ್ರಮದ ಸಂಚಾಲಕ
ಬೈಗುಳ ಸಹಜವಾಗಿ ಒಂದು ಜಾನಪದ ನುಡಿ. ಬೈಗುಳ ಶಬ್ದದ ಸೊಗಡೇ ವಿಶಿಷ್ಟ. ಹತ್ತು ಹಲವು ರೀತಿಯಲ್ಲಿ ಬೈಗುಳ ಪ್ರಯೋಗವಾಗುತ್ತದೆ. ಶಿಷ್ಠ ಪರಿಕಲ್ಪನೆಯ ಅನುಕರಣೆಯಿಂದ ಜನಪದ ಬೈಗುಳ ಭಾಷೆಗಳು ಆತ್ಮಹತ್ಯೆ ಮಾಡಿಕೊಂಡಿವೆ. ಈ ಹಿನ್ನೆಲೆ ನುಡಿಗಳನ್ನು ದಾಖಲೀಕರಿಸುವ ಉದ್ದೇಶದಿಂದ ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ ನಡೆಸಿದ ಪ್ರಯತ್ನ ಯಶ ಕಂಡಿದೆ.
ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷ, ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ, ಕೊಡಗು