

ಬಂಟ್ವಾಳ: ಶ್ರೇಷ್ಠ ಸಮಾಜಸೇವಕ ಕೀರ್ತಿಶೇಷ ಕೆ.ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ನಡೆಯುವ ಕ್ರೀಡೆ ಮೂಲಕ ಅಶಕ್ತರಿಗೆ ಸಹಾಯಹಸ್ತ ನೀಡುವ ಯುವವಾಹಿನಿ ಕಾರ್ಯ ಇತರರಿಗೂ ಸ್ಫೂರ್ತಿ ಹಾಗೂ ಪ್ರೇರಣೆ ನೀಡಿದೆ ಎಂದು ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ತಿಳಿಸಿದರು.
ಭಾನುವಾರ ಬಂಟ್ವಾಳ ಎಸ್.ವಿ.ಎಸ್. ಶಾಲಾ ಮೈದಾನದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಬೈದಶ್ರೀ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ, ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಕ್ರಿಕೆಟ್ ಪಂದ್ಯಾಟದ ಟ್ರೋಪಿ ಅನಾವರಣಗೊಳಿಸಿದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಲೋಹಿತ್ ಆಕಾಶಭವನ ಕ್ರಿಕೆಟ್ ಪಂದ್ಯಾಟ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಮಚಂದ್ರ ಸುವರ್ಣ, ರಾಜೇಶ್ ಸುವರ್ಣ, ರಾಜೇಶ್, ಅರುಣ್ ಕುಮಾರ್, ಹರೀಶ್ ಕೋಟ್ಯಾನ್ ಕುದನೆ ಉಪಾಧ್ಯಕ್ಷ ನಾರಾಯಣ ಪೂಜಾರಿ ಪಲ್ಲಿಕಂಡ ಉಪಸ್ಥಿತರಿದ್ದರು.
ಕ್ರೀಡಾ ನಿರ್ದೇಶಕ ಮಧುಸೂದನ್ ಮದ್ವ ಸ್ವಾಗತಿಸಿದರು. ಸಂಚಾಲಕ ವಿಕ್ರಮ್ ಶಾಂತಿ ವಂದಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.