ಬಹುರೂಪಿ ರಂಗೋತ್ಸವ ಯಶಸ್ವಿ: ಅಡ್ಡಂಡ ಸಿ.ಕಾರ್ಯಪ್ಪ

ಅಡ್ಡಂಡ ಕಾರ್ಯಪ್ಪ
Published on

ಮೈಸೂರು: ‘ರಾಷ್ಟ್ರೀಯ ರಂಗಹಬ್ಬ’ ಬಹುರೂಪಿ ಉತ್ಸವಕ್ಕೆ ಮಳೆಯ ನಡುವೆಯೂ ಯಶಸ್ಸು ಸಿಕ್ಕಿದೆ. ಈ ಬಾರಿಯ ಬಹುರೂಪಿ ಪರಿಕಲ್ಪನೆ ‘ಭಾರತೀಯತೆ’ ಎಲ್ಲೆಡೆ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
2021ನೇ ಸಾಲಿನ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು ಕರೊನಾ ಕಾರಣದಿಂದಾಗಿ ಇದೇ ವರ್ಷದ (2022) ಮಾರ್ಚ್‌ನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ, ವರ್ಷಾಂತ್ಯದಲ್ಲಿ 2022ನೇ ಸಾಲಿನ ಬಹುರೂಪಿ ಉತ್ಸವ ನಡೆದಿದೆ. ‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನ ಹಾಗೂ ಸಮಯ ಅಭಾವದ ನಡುವೆಯೂ ರಂಗಾಯಣದ ಕಲಾವಿದರು, ಭಾರತೀಯ ರಂಗ ವಿದ್ಯಾಲಯದ ವಿದ್ಯಾರ್ಥಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಯಾವುದೇ ಅಡೆತಡೆಗಳಿಲ್ಲದೆ ಬಹುರೂಪಿ ಮುಕ್ತಾಯಗೊಂಡಿದೆ. ‘ಭಾರತೀಯತೆ’ ಪರಿಕಲ್ಪನೆ ಅಡಿಯಲ್ಲಿ ನಡೆದ ವಿವಿಧ ಭಾಷೆಗಳ ನಾಟಕ, ಚಲನಚಿತ್ರೋತ್ಸವ, ಜನಪದೋತ್ಸವ, ಕರಕುಶಲ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ, ವಿಚಾರಸಂಕಿರಣ, ಭಾಷಣ ಸ್ಪರ್ಧೆ ಸೇರಿದಂತೆ ಎಲ್ಲ ಚಟುವಟಿಕೆಗಳೂ ಯಶಸ್ವಿಯಾಗಿವೆ ಎಂದರು.
ಉತ್ಸವ ಉದ್ಘಾಟನೆಯಾಗುವವರೆಗೂ ಮಳೆಯಾಗುತ್ತದೆಂದು ತಿಳಿದಿರಲಿಲ್ಲ. ಮಳೆ ಬರುವುದು ಗೊತ್ತಿದ್ದರೆ ಮಳಿಗೆಗಳಿಗೆ ಬೇರೆ ವ್ಯವಸ್ಥೆ ಮಾಡುತ್ತಿದ್ದೆವು. ಮಳೆಯಿಂದಾಗಿ ಎರಡು ಮಳಿಗೆಯವರು ಮಧ್ಯದಲ್ಲಿಯೇ ಹೋದರು. ಅವರ ಜಾಗಕ್ಕೆ ಹೊಸದಾಗಿ ನಾಲ್ಕು ಜನ ಬಂದರು. ಮಳೆ ನೀರು ಬೀಳದಂತೆ ಎಲ್ಲ ಮಳಿಗೆಗಳಿಗೆ ಟಾರ್ಪಾಲ್ ಕಟ್ಟಿಕೊಟ್ಟಿದ್ದೆವು. ಪುಸ್ತಕ ಸೇರಿದಂತೆ ಎಲ್ಲ ಮಳಿಗೆಗಳಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಳ್ಳೆಯ ವ್ಯಾಪಾರವೂ ಆಗಿದೆ. ಆಹಾರ ಮೇಳದ ಬಗ್ಗೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

3.5 ಲಕ್ಷ ರೂ. ಆದಾಯ ಗಳಿಕೆ:
8 ದಿನಗಳ ರಂಗೋತ್ಸವದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾ ಶ್ರೀಮಂತಿಕೆ ಪ್ರದರ್ಶಿಸಿದರು. ಸಾವಿರಾರು ಪ್ರೇಕ್ಷಕರು ಬಹುರೂಪಿ ಸಂಭ್ರಮದಲ್ಲಿ ಭಾಗಿಯಾದರು ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಈ ಬಾರಿ ರಂಗಾಯಣಕ್ಕೆ 3.5 ಲಕ್ಷ ರೂ. ಆದಾಯ ದೊರಕಿದೆ. ಬಹುರೂಪಿಯ ಎಲ್ಲ ನಾಟಕಗಳನ್ನು 4 ಸಾವಿರ ಜನ ನೋಡಿದ್ದಾರೆ. ಉತ್ಸವದಲ್ಲಿ ಸಾಂಸ್ಕೃತಿಕ ನಗರಿಯ ಜನರು, ರಂಗಪ್ರಿಯರು ಬಹುಭಾಷಾ ನಾಟಕಗಳಿಗೆ ಮಾರುಹೋಗಿದ್ದಾರೆ. ಕಲಾಮಂದಿರದಲ್ಲಿ ನಡೆದ ತೆಲುಗಿನ ಮಾಯಾಬಜಾರ್, ಬೆಂಗಳೂರಿನ ಬೆನಕ ತಂಡದ ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕ ಹೌಸ್‌ಫುಲ್ ಆಗಿದ್ದವು. ಭೂಮಿಗೀತ ಹಾಗೂ ಸಂಪತ್ ರಂಗಮಂದಿರದಲ್ಲಿ ನಡೆದ ಬಹುತೇಕ ಎಲ್ಲ ನಾಟಕಗಳ ಟಿಕೆಟ್ ಖಾಲಿಯಾಗಿದ್ದವು ಎಂದರು.
ಈ ವರ್ಷ 12 ಕನ್ನಡ ನಾಟಕ ಮತ್ತು ತುಳು ನಾಟಕ ಸೇರಿ ಒಟ್ಟು 20 ನಾಟಕಗಳು ಪ್ರದರ್ಶನಗೊಂಡವು. ಕಳೆದ ಬಾರಿಯ ಉತ್ಸವದಲ್ಲಿ 36 ನಾಟಕಗಳ ಪ್ರದರ್ಶನ ನಡೆದಿದ್ದು, ಟಿಕೆಟ್ ಮಾರಾಟದಲ್ಲಿ 7 ಲಕ್ಷ ರೂ. ಸಂಗ್ರಹವಾಗಿತ್ತು ಎಂದರು.
ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಬಹುರೂಪಿ ಸಂಚಾಲಕ ಜಗದೀಶ್ ಮನವಾರ್ತೆ ಇತರರಿದ್ದರು.

25 ಲಕ್ಷ ರೂ. ಅನುದಾನ, 40 ಲಕ್ಷ ರೂ. ಖರ್ಚು!
ಈ ಬಾರಿ ಬಹುರೂಪಿಗೆ ರಾಜ್ಯ ಸರ್ಕಾರ ಕೇವಲ 25 ಲಕ್ಷ ರೂ. ಅನುದಾನ ನೀಡಿತ್ತು. ಆದರೆ, ಉತ್ಸವಕ್ಕೆ 40 ಲಕ್ಷ ರೂ. ಖರ್ಚಾಗಿದೆ. ರಂಗಾಯಣದ ಬೇರೆ ಹಣವನ್ನು ಉತ್ಸವದ ಖರ್ಚಿಗೆ ಬಳಸಿಕೊಳ್ಳಲಾಗಿದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ಕಳೆದ ಮೂರು ವರ್ಷದಿಂದ ಬಹುರೂಪಿಯನ್ನು ರಾಜ್ಯದ ಉತ್ಸವ ಎಂದು ಸರ್ಕಾರ ಪರಿಗಣಿಸಿದೆ. ಹಾಗಾಗಿ, ಮೂರು ವರ್ಷದಿಂದ ಹೆಚ್ಚಿನ ಜವಾಬ್ದಾರಿ ವಹಿಸಿ ಬಹುರೂಪಿ ನಡೆಸಿದ್ದೇವೆ. ನನ್ನ ಅವಧಿಯಲ್ಲಿ ಮೊದಲ ವರ್ಷ ಬಹುರೂಪಿಗೆ 1 ಕೋಟಿ ರೂ., ಎರಡನೇ ವರ್ಷ 50 ಲಕ್ಷ ರೂ. ಅನುದಾನ ಸಿಕ್ಕಿತ್ತು ಎಂದರು.

ರಂಗಾಯಣಕ್ಕೆ ಸ್ಥಳ ನೀಡುವಂತೆ ಮನವಿ
ಅರವಿಂದನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ 2 ಎಕರೆ ಜಾಗ ಇದ್ದು, ಅದನ್ನು ರಂಗಾಯಣಕ್ಕೆ ನೀಡುವಂತೆ ಬಹುರೂಪಿ ಉದ್ಘಾಟನೆ ವೇಳೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ರಂಗಾಯಣಕ್ಕೆ ಜಾಗದ ಕೊರತೆ ಇದೆ. ಆದರೆ ಅರವಿಂದನಗರದಲ್ಲಿ 2 ಎಕರೆ ಖಾಲಿ ಜಾಗ ಇದೆ. ಅದನ್ನು ಗಾಂಧಿ ವಿಚಾರ ಪರಿಷತ್‌ಗೆ ನೀಡಿಲ್ಲ. ಆದರೆ, ಖಾಸಗಿ ಟ್ರಸ್ಟ್‌ನವರು ಆ ಜಾಗವನ್ನು ಕಬಳಿಸಲು ಪ್ರಯತ್ನಿಸಿದ್ದರು. ಸದ್ಯ ಅವರು ಹಾಕಿದ್ದ ಬೋರ್ಡ್ ತೆರವು ಮಾಡಲಾಗಿದ್ದು, ಆ ಜಾಗವನ್ನು ರಂಗಾಯಣಕ್ಕೆ ನೀಡುವಂತೆ ಕೋರಿದ್ದೇವೆ. ಶೀಘ್ರದಲ್ಲೇ ಆರಂಭವಾಗಲಿರುವ ಬೆಳಗಾವಿ ಅಧಿವೇಶನದ ಸಮಯದಲ್ಲೂ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರ ಸಮ್ಮುಖದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಈ ಇಲಾಖೆಯನ್ನು ಎಂದಿಗೂ ಕಡೆಗಣಿಸಬಾರದು. ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಮತ್ತು ಸಚಿವರನ್ನು ನೀಡಬೇಕು. ಮೊದಲು ಮೈಸೂರು ರಂಗಾಯಣ ಮಾತ್ರ ಇತ್ತು. ಈಗ ಆರು ರಂಗಾಯಣ ಆಗಿವೆ. ಹಿಂದೆ ಒಂದು ರಂಗಾಯಣಕ್ಕೆ ನೀಡುತ್ತಿದ್ದ ಅನುದಾನವನ್ನು ಈಗ ಎಲ್ಲ ರಂಗಾಯಣಗಳಿಗೂ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ರಂಗಾಯಣ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಆದ್ದರಿಂದ ರಂಗಾಯಣಗಳಿಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಬೇಕು. ರಂಗಾಯಣಗಳ ಸಂಖ್ಯೆ 10 ದಾಟಬೇಕು.ಅಡ್ಡಂಡ ಸಿ. ಕಾರ್ಯಪ್ಪ, ರಂಗಾಯಣ ನಿರ್ದೇಶಕ, ಮೈಸೂರು

ಬಿಕೋ ಎನ್ನುತ್ತಿದ್ದ ರಂಗಾಯಣ ಅಂಗಳ
8 ದಿನಗಳ ಕಾಲ ಸಾಂಸ್ಕೃತಿಕ ಸೊಬಗಿನಿಂದ ರಂಗೇರಿದ್ದ ರಂಗಾಯಣ ಆವರಣ ಶುಕ್ರವಾರ ಭಣಗುಡುತ್ತಿತ್ತು. ವ್ಯಾಪಾರಿಗಳು ಮಳಿಗೆಗಳನ್ನು ತೆರವುಗೊಳಿಸಿದರೆ, ರಂಗಾಯಣದ ಸಿಬ್ಬಂದಿ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ನಿರತರಾಗಿದ್ದರು. ಪುಸ್ತಕ, ಆಹಾರ, ಕರಕುಶಲ ವಸ್ತುಗಳ ಮಾರಾಟಕ್ಕಾಗಿ ಶಾಮಿಯಾನದಿಂದ ನಿರ್ಮಿಸಿದ್ದ ಮಳಿಗೆಗಳನ್ನು ವ್ಯಾಪಾರಿಗಳು ತೆರವುಗೊಳಿಸಿದರು. ಕೆಲವರು ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತಟ್ಟೆ, ಲೋಟ, ಕಸ-ಕಡ್ಡಿಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಕಂಡುಬಂತು.
ಸಂಜೆಯಾಗುತ್ತಲೇ ಗಿಜಿಗುಡುತ್ತಿದ್ದ ಜನಸಮೂಹ, ಕಾರು, ಬೈಕ್‌ಗಳ ಅಬ್ಬರ, ವರ್ಣಮಯ ದೀಪಗಳ ಬೆಳಕು, ವಿವಿಧ ಖಾದ್ಯಗಳ ಘಮಲು ಇದ್ಯಾವುದೂ ಇಲ್ಲದೆ ರಂಗಾಯಣ ಹಾಗೂ ಕಲಾಮಂದಿರದ ಆವರಣ ಬಿಕೋ ಎನ್ನುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net