‘ಬಹುರೂಪಿ’ ಪೋಸ್ಟರ್ ಬಿಡುಗಡೆ

mysore
Published on

ಮೈಸೂರು: ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ‘ಇವ ನಮ್ಮವ, ಇವ ನಮ್ಮವ’ ಎಂಬ ಉಕ್ತಿಯ ಶೀರ್ಷಿಕೆಯಡಿ ಬಹುರೂಪಿ ನಾಟಕೋತ್ಸವ ಮಾ.6ರಿಂದ 11 ರವರೆಗೆ ರಂಗಾಯಣದಲ್ಲಿ ಜರುಗಲಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ನಾಟಕೋತ್ಸವದ ಯಶಸ್ಸಿಗೆ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಾಟಕೋತ್ಸವ ಪೂರ್ವಭಾವಿ ಸಭೆಯಲ್ಲಿ ನಾಟಕೋತ್ಸವದ ಭಿತ್ತ್ತಿಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಬಹುರೂಪಿ ನಾಟಕೋತ್ಸವ ಜೈಪುರ ಉತ್ಸವ, ಬೆಂಗಳೂರು ಹಬ್ಬದ ರೀತಿಯಲ್ಲಿ ಬ್ರಾೃಂಡಿಂಗ್ ಆಗಬೇಕು ಎಂದರು.


ಮಾ.6ರಂದು ಜಾನಪದೋತ್ಸವ ಉದ್ಘಾಟನೆಗೂಳ್ಳಲಿದ್ದು, 7ರಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕ ಪ್ರದರ್ಶನಕ್ಕೆ 118 ಅರ್ಜಿಗಳು ಸಲ್ಲಿಕೆಯಾಗಿವೆ. ಸಮಿತಿಯಿಂದ 18 ನಾಟಕಗಳನ್ನು ಆಯ್ಕೆ ಮಾಡಲಾಗಿದೆ.

ಸಾಮಾಜಿಕ ಸಮಸ್ಯೆಗಳಿಗೆ ಒತ್ತು ನೀಡುವುದರೊಂದಿಗೆ, ಪ್ರಯೋಗಶೀಲ ನಾಟಕಗಳಿಗೆ ಎಲ್ಲ ವಯೋಮಾನದವರಿಗೆ ಸಲ್ಲುವ ನಾಟಕಗಳು ಪ್ರದರ್ಶನವಾಗಲಿವೆ. ಕನ್ನಡ ಹಾಗೂ ಬಹುಭಾಷಾ ನಾಟಕಗಳು ಇರಲಿವೆ. ಇದರೊಂದಿಗೆ ರಾಷ್ಟ್ರೀಯ ವಿಚಾರಸಂಕಿರಣಗಳು ಜರುಗಲಿದ್ದು, ಕಲಾತ್ಮಕ ಹಾಗೂ ವಿದ್ವತ್ಪೂರ್ಣ ಚಿಂತನೆಗೆ ಹಚ್ಚುವ ವಿಷಯಗಳಿರಲಿ ಎಂದರು.


ನಾಟಕೋತ್ಸವಕ್ಕೆ ಗಣ್ಯರು, ಚಿಂತಕರು ಆಗಮಿಸುವುದರಿಂದ ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿ, ಪಾಲಿಕೆಯವರು ಕಾರ್ಯಕ್ರಮ ನಡೆಯುವ ಕಲಾಮಂದಿರ ಸುತ್ತಮುತ್ತಲಿನ ಸ್ವಚ್ಛತೆಗೆ ಗಮನ ಹರಿಸಬೇಕು.

ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಟ್ರಾಫಿಕ್ ಸಮಸ್ಯೆ ಆಗದಂತೆ ಹಾಗೂ ಸಾರಿಗೆ ಇಲಾಖೆಯವರು ಮುಖ್ಯ ಸ್ಥಳಗಳಿಗೆ ಬಸ್ ಸಂಚಾರ ವ್ಯವಸ್ಥೆ ಇರುವಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.


4 ಸ್ಥಳಗಳಲ್ಲಿ ಆಯೋಜನೆ:


ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ನಾಟಕೋತ್ಸವ 4 ಸ್ಥಳಗಳಲ್ಲಿ ನಡೆಯಲಿದೆ. 5 ದಿನಗಳ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಕರಕುಶಲ ವಸ್ತು ಪ್ರದರ್ಶನ, ಕರಕುಶಲ ಪ್ರಾತ್ಯಕ್ಷಿಕೆ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ಜಾನಪದ ಕಲಾ ಪ್ರದರ್ಶನ ಹಾಗೂ ರಂಗ ಗೀತೆಗಳ ಗಾಯನ ಇರಲಿದೆ ಎಂದರು.


ಕನ್ನಡ ಮತ್ತು ಸಂಸ್ಕೃತ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಪಾಲಿಕೆ ಉಪ ಆಯುಕ್ತ ಸೋಮಶೇಖರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net