ಮಾ.6 ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

bahurupi-6
Published on

ಮೈಸೂರು: ರಂಗಾಯಣ ಮಾ.6 ರಿಂದ 11ರವರೆಗೆ ಹಮ್ಮಿಕೊಂಡಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಬುಧವಾರ ಚಾಲನೆ ದೊರೆಯಲಿದ್ದು, ಬಹುರೂಪಿಗೆ ರಂಗಾಯಣ ಸಂಪೂರ್ಣ ಸಜ್ಜುಗೊಂಡಿದೆ.

‘ಇವ ನಮ್ಮವ ಇವ ನಮ್ಮವ’ ಎಂಬ ಬಸವಣ್ಣ ಅವರ ವಚನದ ಸಾಲಿನ ಶೀರ್ಷಿಕೆಯೊಂದಿಗೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಮಾ.6 ರಂದು ಸಂಜೆ 4.30ಕ್ಕೆ ಸಾಹಿತಿ ಜಯಂತ ಕಾಯ್ಕಿಣಿ ಚಾಲನೆ ನೀಡುವರು. ಅಂದು ಸಂಜೆ 5.30ಕ್ಕೆ ಜನಪದ ಸಂಭ್ರಮ ಏರ್ಪಡಿಸಲಾಗಿದೆ. ಮೊದಲ ದಿನ ಯಾವುದೇ ನಾಟಕ ಪ್ರದರ್ಶನ ಇರುವುದಿಲ್ಲ. ಮಾ.7 ರಿಂದ 11ರವರೆಗೆ ಸಂಜೆ 6 ರಿಂದ ನಿರಂತರವಾಗಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡ ಭಾಷೆಯ 10 ಹಾಗೂ ತುಳು ಭಾಷೆಯ ಒಂದು ನಾಟಕ ಸೇರಿದಂತೆ ಒಟ್ಟು 17 ನಾಟಕಗಳು ಭೂಮಿಗೀತ, ವನರಂಗ, ಕಲಾಮಂದಿರ, ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.

ಮಾ.7 ರಿಂದ 11ರವರೆಗೆ ರಂಗಾಯಣ ಆವರಣದ ಶ್ರೀರಂಗದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ದೇಶ, ವಿದೇ ಶದ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಮಾ.9 ಮತ್ತು 10 ರಂದು ಬಿ.ವಿ.ಕಾರಂತ ರಂಗಚಾವಡಿಯಲ್ಲಿ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಬಹುರೂಪಿ ‘ಇವ ನಮ್ಮವ ಇವ ನಮ್ಮವ’ ಘೋಷವಾಕ್ಯದಲ್ಲಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಪೂರಕವಾಗಿ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಮಾ.9 ರಂದು ವಚನ ಚಳುವಳಿಯ ಸಮಕಾಲೀನ ವ್ಯಾಖ್ಯಾನ, ವಚನ ಚಳವಳಿ ಮತ್ತು ಸ್ತ್ರೀ ಸಮಾನತೆ, ವಚನ ಚಳವಳಿ ಮತ್ತು ಕನ್ನಡ ರಂಗಭೂಮಿ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಮಾ.10 ರಂದು ರಂಗಭೂಮಿ ಮತ್ತು ತತ್ವಜ್ಞಾನ, ರಂಗಭೂಮಿ ಮತ್ತು ತಂತ್ರಜ್ಞಾನ, ಸಮುದಾಯದತ್ತ ಸಮಕಾಲೀನ ರಂಗಭೂಮಿ ವಿಷಯದ ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net