ಮಾ.6ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

mysore
Published on

ಮೈಸೂರು: ಮೈಸೂರು ರಂಗಾಯಣದ ಪ್ರಮುಖ ಕಾರ್ಯಕ್ರಮವಾದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2024’ ಮಾ.6ರಿಂದ 1ರ ವರೆಗೆ ಹಮ್ಮಿಕೊಳ್ಳಲಾಗಿದೆ.


ಪ್ರತಿವರ್ಷ ಸಂಕ್ರಾಂತಿ ಹಬ್ಬ ಸಮಯದಲ್ಲಿ ನಡೆಯುತ್ತಿದ್ದ ಈ ರಂಗೋತ್ಸವವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷಾವಧಿಯಲ್ಲಿ ಆಯೋಜಿಸುವ ಮೂಲಕ ತನ್ನ ಸಂಪ್ರದಾಯವನ್ನು ರಂಗಾಯಣವೇ ಮುರಿದಿದೆ.


ಸಮಸಮಾಜದ ಕನಸುಗಾರ, ವಚನ ಚಳವಳಿಯ ನೇತಾರ ವಿಶ್ವಗುರು ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಎಂಬ ವಚನದ ಸಾಲಿನ ಆಶಯ ಶೀರ್ಷಿಕೆಯೊಂದಿಗೆ ನಾಟಕೋತ್ಸವ ನಡೆಸಲಾಗುತ್ತಿದೆ. ರಂಗಾಯಣದ ನಿರ್ದೇಶಕರಿಲ್ಲದೆ ನಾಟಕೋತ್ಸವ ನಡೆಯುತ್ತಿದೆ. 2009, 2017ರಲ್ಲೂ ಇದೇ ರೀತಿ ನಿರ್ದೇಶಕರಿಲ್ಲದೆ ನಡೆದಿತ್ತು.

17 ನಾಟಕಗಳು ಪ್ರದರ್ಶನ


ಕವಿ, ನಾಟಕಕಾರ ಜಯಂತ್ ಕಾಯ್ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಉತ್ತರಪ್ರದೇಶ, ಪಶ್ಚಿಮಬಂಗಾಳ, ಮಣಿಪುರ, ಕೇರಳ, ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡ ಭಾಷೆಯ 10, ತುಳು ಭಾಷೆಯ 1 ಸೇರಿದಂತೆ 17 ನಾಟಕಗಳು ಪ್ರದರ್ಶನವಾಗಲಿವೆ. ಮಹಿಳಾ ಆಶಯವುಳ್ಳ ಒಂದು ಯಕ್ಷಗಾನ ಈ ಸಲ ಇರಲಿವೆ. ಭೂಮಿಗೀತ, ವನರಂಗ, ಕಲಾಮಂದಿರ ಮತ್ತು ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿವೆ. ವಿವಿಧ ಜಿಲ್ಲೆಗಳ 16 ಜಾನಪದ ಕಲಾತಂಡಗಳು ಕಿಂದರಿಜೋಗಿ ವೇದಿಕೆಯಲ್ಲಿ ಪ್ರದರ್ಶನ ನೀಡಲಿವೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಈ ಉತ್ಸವದ ಅಂಗವಾಗಿ ಈ ಸಲವೂ ರಾಷ್ಟ್ರೀಯ ವಿಚಾರಸಂಕಿರಣವನ್ನು ಮಾ.9 ಮತ್ತು 10ರಂದು ಆಯೋಜಿಸಿದ್ದು, ‘ವಚನ ಸಾಹಿತ್ಯ ಹಾಗೂ ರಂಗಭೂಮಿ’ ಕುರಿತ ಗೋಷ್ಠಿಗಳಲ್ಲಿ ನಾಡಿನ ಸಾಹಿತಿಗಳು, ವಿದ್ವಾಂಸರಾದ ಎಸ್.ನಟರಾಜ ಬೂದಾಳು, ಎಲ್.ಎನ್.ಮುಕುಂದರಾಜ್, ಡಾ.ರಹಮತ್ ತರೀಕೆರೆ, ಡಾ.ವಿನಯಾ ಒಕ್ಕುಂದ, ಕವಿತಾ ರೈ, ಎಚ್.ಎಸ್.ಶ್ರೀಮತಿ, ಡಾ.ರಾಜಪ್ಪ ದಳವಾಯಿ, ನಟರಾಜ್ ಹೊನ್ನವಳ್ಳಿ, ಸಿ.ಬಸವಲಿಂಗಯ್ಯ, ಡಾ.ಸುಂದರ್ ಸರಕ್ಕೈ, ಡಾ.ಶ್ರೀಪಾದ ಭಟ್, ರಘುನಂದನ, ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ಇನ್ನಿತರರು ತಮ್ಮ ವಿಚಾರ ಮಂಡಿಸಲಿದ್ದಾರೆ. ಕವಿ, ಚಿಂತಕ ಎಚ್.ಎಸ್.ಶಿವಪ್ರಕಾಶ್ ವಿಚಾರಸಂಕಿರಣ ಉದ್ಘಾಟಿಸುವರು. ಹಿರಿಯ ಲೇಖಕ ಓ.ಎಲ್.ನಾಗಭೂಷಣಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಚಲನಚಿತ್ರೋತ್ಸವ, ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಪ್ರದರ್ಶನ


ಶ್ರೀರಂಗ ರಂಗಮಂದಿರದಲ್ಲಿ ರಾಷ್ಟ್ರೀಯ ಚಲನಚಿತ್ರೋತ್ಸವ, ರಂಗಾಯಣದ ಆವರಣದಲ್ಲಿ ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಪ್ರದರ್ಶನ, ಲಂಕೇಶ್ ಕಲಾ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ಪೇಂಟಿಂಗ್ಸ್ ಹಾಗೂ ಪತ್ರಗಾರ ಇಲಾಖೆಯಿಂದ ಚಾರಿತ್ರಿಕ ದಾಖಲೆಗಳು ಮತ್ತು ಹಸ್ತಪ್ರತಿಗಳ ಪ್ರದರ್ಶನ, ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಾಸ್ತವಿಕ ಚಿತ್ರಕಲಾ ಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಎಚ್.ಎಸ್.ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಮರಕಲಾ ಶಿಕ್ಷಕ ಕೆ.ಅಂಜುಸಿಂಗ್ ಇದ್ದರು.

50 ಲಕ್ಷ ರೂ. ಬಜೆಟ್


ಕರೊನಾ ಕಾಲದಲ್ಲಿ ಉಳಿಕೆಯಾದ 25 ಲಕ್ಷ ರೂ. ಮತ್ತು ಪ್ರಸ್ತುತ ಬಿಡುಗಡೆಯಾಗಿರುವ 25 ಲಕ್ಷ ರೂ. ಸೇರಿದಂತೆ 50 ಲಕ್ಷ ರೂ. ವೆಚ್ಚದಲ್ಲಿ ಬಹುರೂಪಿ ರೂಪಿಸಲಾಗುತ್ತಿದೆ ಎಂದು ನಿರ್ಮಲಾ ಮಠಪತಿ ತಿಳಿಸಿದರು.


ಈ ಹಿಂದೆಯೂ ರಂಗಾಯಣ ನಿರ್ದೇಶಕರಿಲ್ಲದೆ ಬಹುರೂಪಿ ನಡೆದಿದೆ. ಇದರ ಆಶಯ, ಉದ್ದೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಾಟಕೋತ್ಸವ ಏರ್ಪಡಿಸಲಾಗುವುದು ಎಂದರು.


ಜಾನಪದೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ನಾಟಕಗಳ ವೀಕ್ಷಣೆಗಾಗಿ 100 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲೂ ರಂಗಾಸಕ್ತರು ಟಿಕೆಟ್ ಖರೀದಿಸಬಹುದು ಎಂದರು.

ಪರೀಕ್ಷಾ ಕಾಲದಲ್ಲಿ ನಾಟಕೋತ್ಸವ ಆಯೋಜನೆಯಿಂದ ಏನು ಸಮಸ್ಯೆ ಆಗಲ್ಲ. ಒತ್ತಡ, ಬದಲಾವಣೆಗಾಗಿ ಮಕ್ಕಳು ಸಹ ಬರಲಿದ್ದಾರೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ಯಾವ ನಾಟಕಗಳು?:


ಮುಟ್ಟಿಸಿಕೊಂಡವರು, ಲೋಕದ ಒಳಹೊರಗೆ, ಶಿಶುನಾಳ ಶರೀಫ, ದುಖ್ವಾ ಮೇ ಬೀತಲ್ ರತಿಯಾ(ಹಿಂದಿ) ದ್ರೋಪದಿ ಹೇಳ್ತವ್ಳೆ, ಕಲ್ಯಾಣದ ಬಾಗಿಲು, ಸೀತೆಯ ವ್ಯಥೆ, ಜಂಪ್(ಹಿಂದಿ), ಗ್ಲಾನಿ, ಚಾವುಂಡರಾಯ, ಖಟಾರ(ಮರಾಠಿ), ಕಿಟನ್ ಕೋಲಾ(ಬಂಗಾಳಿ), ಬ್ಲಾೃಕ್‌ಔಟ್, ಚಿಲ್ಲರ ಸಮರಂ(ಮಲಯಾಳಂ), ಕರಿಯದೇವರ ಹುಡುಕಿ, ಅಬೊರಿಜಿನಲ್ ಕ್ರೈ( ಮಣಿಪುರಿ), ಪಾಶ್ವಸಂಗೀತ, ಕಥೆ ಎಡ್ಡೇಂಡು, ಬೆರಳ್ಗೆ ಕೊರಳ್ ನಾಟಕಗಳು ಪ್ರದರ್ಶನವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net