

ಮೈಸೂರು: ರಂಗಾಯಣ ಆರು ದಿನಗಳ ಕಾಲ ‘ಬಿಡುಗಡೆ’ ಘೋಷವಾಕ್ಯದಲ್ಲಿ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಮಂಗಳವಾರ ಸಂಭ್ರಮದ ಚಾಲನೆ ದೊರೆಯಿತು.
ವನರಂಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಅತುಲ್ ಕುಲಕರ್ಣಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತ ನಾಡಿ, ಭಾರತೀಯ ರಂಗಭೂಮಿಗೆ ಕರ್ನಾಟಕದ ಕೊಡುಗೆ ಅಪಾರವಾದದ್ದು. ರಂಗಭೂಮಿಯನ್ನು ಬೆಳೆಸಲು ನೀನಾಸಂ, ರಂಗಾಯಣ ಬಹುದೊಡ್ಡ ಕೊಡುಗೆ ನೀಡಿದೆ. ನಾನು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭ ರಂಗಾಯಣ ಸಂಸ್ಥಾಪಕರಾದ ರಂಗಭೀಷ್ಮ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ರಂಗಾಯಣ ಈ ಬಾರಿ ಆಯೋಜಿಸಿರುವ ನಾಟಕೋತ್ಸವದ ಘೋಷವಾಕ್ಯ ‘ಬಿಡುಗಡೆ’ ಅರ್ಥಪೂರ್ಣವಾಗಿದೆ. ಈ ಪದಕ್ಕೆ ತನ್ನದೇ ಆದ ಮಹತ್ವ ಇದೆ. ಆದರೆ, ಇಂದಿನ ದಿನಗಳಲ್ಲಿ ಈ ಪದವೇ ಕೆಟ್ಟ ಪದವಾಗಿ ಮಾರ್ಪಾಡು ಮಾಡುತ್ತಿರುವುದು ದುರಂತ. ‘ಬಿಡುಗಡೆ’ ಪದದ ಕುರಿತು ಅಪಪ್ರಚಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸತ್ಯವನ್ನು ತಿಳಿಸುವ ಜವಾಬ್ದಾರಿ ರಂಗಭೂಮಿಯ ಮೇಲಿದೆ ಎಂದರು.
ಸಿನಿಮಾರಂಗ ಅತ್ಯಂತ ದುಬಾರಿ ಮಾಧ್ಯಮ. ಸಿನಿಮಾ ತಯಾರಿಸಲು ಸಾಕಷ್ಟು ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಸಿನಿಮಾದಲ್ಲಿ ಶೇ.20 ರಷ್ಟು ಮಾತ್ರ ಕಲೆ ಇರುತ್ತದೆ, ಉಳಿದ ಶೇ.80 ರಷ್ಟು ಹಣವೇ ತುಂಬಿಕೊಂಡಿರುತ್ತದೆ. ಹಾಗಾಗಿ ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ರಂಗಭೂಮಿಯ ಮೇಲಿದೆ. ಉತ್ತಮ ವಿಚಾರಗಳನ್ನು ಬಿತ್ತಲು ಇಂತಹ ಬಹುರೂಪಿ ಉತ್ಸವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ನಟ ಪ್ರಕಾಶ್‌ರಾಜ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನಟಿ ಭಾವನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಉಪ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ರಂಗಸಮಾಜ ಸದಸ್ಯರಾದ ಎಚ್.ಎಸ್.ಸುರೇಶ್ ಬಾಬು, ರಾಜಪ್ಪ ದಳವಾಯಿ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಯಕ್ಷರಂಗಾಣ ನಿರ್ದೇಶಕ ವೆಂಕಟರಮಣ ಐತಾಳ್ ಹಾಗೂ ಇತರರು ಇದ್ದರು.