11ರಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

rangayana
‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಟಿಕೆಟ್ ಮಾರಾಟಕ್ಕೆ ರಂಗಕರ್ಮಿ ನಾಗಚಂದ್ರ ಚಾಲನೆ ನೀಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇತರರಿದ್ದರು.
Published on

*ನಾಟಕಗಳ ಟಿಕೆಟ್ ಮಾರಾಟಕ್ಕೆ ರಂಗಕರ್ಮಿ ನಾಗಚಂದ್ರ ಚಾಲನೆ

* ಈ ಬಾರಿ ‘ತಾಯಿ’ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು

* ಮಾರ್ಚ್ 4 ರಿಂದ ಆನ್ ಲೈನ್ ನಲ್ಲೂ ಟಕೆಟ್ ಮಾರಾಟ ಆರಂಭ

ಮೈಸೂರು: ಮಾ. 11ರಿಂದ 20ರವರೆಗೆ ರಂಗಾಯಣದ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ಟಿಕೆಟ್ ಮಾರಾಟ ಆರಂಭವಾಗಿದೆ.
ರಂಗಾಯಣದ ಅಂಗಳದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ನಾಗಚಂದ್ರ ಅವರು, ಪಂಜಾಬಿ ಭಾಷೆಯ ‘ಷಹೀದ್ ಉದಮ್‌ಸಿಂಗ್ ಆಜಾದ್’ ನಾಟಕದ ಟಿಕೆಟ್ ಕೊಳ್ಳುವ ಮೂಲಕ ರಂಗೋತ್ಸವದ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಿದರು.


ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಈ ಬಾರಿ ‘ತಾಯಿ’ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆ ರಂಗೋತ್ಸವವನ್ನು ರೂಪಿಸಲಾಗಿದೆ. ಕರೊನಾ ಅಬ್ಬರ ಕಡಿಮೆಯಾಗಿದೆ. ಕೋವಿಡ್ ನಿರ್ಬಂಧಗಳು ತೆರವಾಗಿವೆ. ಎಲ್ಲೆಡೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಹುರೂಪಿ ಆಯೋಜನೆಗೆ ಮುಂದಾಗಿದ್ದೇವೆ ಎಂದರು.
ಮಾರ್ಚ್ 11ರಂದು ಜನಪದ ಉತ್ಸವ ಆರಂಭವಾಗಲಿದೆ. ಅಂದು ಸಂಜೆ 4.30ಕ್ಕೆ ಕಿಂದರಿಜೋಗಿ ಜನಪದ ರಂಗದಲ್ಲಿ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಜನಪದೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ, ಜಾನಪದ ತಜ್ಞೆ ಡಾ.ವಿಜಯಲಕ್ಷ್ಮೀ ಮನಾಪುರ ಭಾಗವಹಿಸಲಿದ್ದಾರೆ.


12ರಂದು ರಾಷ್ಟ್ರೀಯ ರಂಗೋತ್ಸವಕ್ಕೆ ಚಾಲನೆ ಸಿಗಲಿದ್ದು, ಅಂದಿನಿಂದಲೇ ನಾಟಕ ಹಾಗೂ ಸಿನಿಮಾ ಪ್ರದರ್ಶನವೂ ಆರಂಭವಾಗಲಿವೆ. ಈ ಬಾರಿ 35 ನಾಟಕಗಳನ್ನು ಆಯ್ಕೆ ಮಾಡಿದ್ದು, ತಮಿಳು, ರಾಜಸ್ಥಾನಿ, ಒರಿಯಾ, ಮಲಯಾಳಂ, ತುಳು, ತೆಲುಗು ಸೇರಿದಂತೆ 12 ಭಾಷೆಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ಸ್ವಾತಂತ್ರೊೃೀತ್ಸವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲೂ ನಾಟಕಗಳು ಇವೆ. ಇದರೊಂದಿಗೆ, 20 ಕನ್ನಡ ನಾಟಕಗಳು ಇರಲಿವೆ. ವೃತ್ತಿಕಂಪನಿ ನಾಟಕ, ಪೌರಾಣಿಕ ನಾಟಕಕ್ಕೂ ಅವಕಾಶ ನೀಡಲಾಗಿದೆ. ಜತೆಗೆ, ಬಯಲಾಟ, ಯಕ್ಷಗಾನ, ದೊಡ್ಡಾಟ, ಗೊಂಬೆಯಾಟಕ್ಕೂ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಿದರು.


ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಜೋಗತಿ ನೃತ್ಯ ಇನ್ನಿತರ ಪ್ರಕಾರದ ಕಲೆಗಳ ಪ್ರದರ್ಶನ ಇರಲಿದೆ. ಇದರಲ್ಲಿ ಮಹಿಳೆಯರಿಗೆ ಶೇ.50ರಷ್ಟು ಅವಕಾಶ ಕಲ್ಪಿಸಿಕೊಡಲಾಗಿದೆ. ಹೊರ ರಾಜ್ಯಗಳ ಜಾನಪದ ಕಲೆಗಳಾದ ಮಧ್ಯಪ್ರದೇಶದ ಬಾಗೋರಿಯಾ, ಮಹಾರಾಷ್ಟ್ರದ ಢಾಂಗಾಲಿಯಾ, ಒಡಿಶಾದ ಗೋಟಿಪೂವಾ, ಮಣಿಪುರದ ಲಾಯ್ ಹರೋಬ, ಕೇರಳದ ಕಳರಿಪಯಟ್ ನೃತ್ಯ ಈ ಸಲದ ವಿಶೇಷವಾಗಿದೆ ಎಂದು ಮಾಹಿತಿ ನೀಡಿದರು.


ಚಲನಚಿತ್ರೋತ್ಸವದಲ್ಲಿ ‘ತಾಯಿ’ ಪರಿಕಲ್ಪನೆಯ 2 ಕನ್ನಡ ಸೇರಿದಂತೆ ಒಟ್ಟು 25 ಸಿನಿಮಾಗಳು ಪ್ರದರ್ಶನವಾಗಲಿದ್ದು, ದಿವಂಗತ ಪುನೀತ್ ರಾಜ್‌ಕುಮಾರ್ ಅಭಿಯನದ ‘ರಾಜಕುಮಾರ’ ಮತ್ತು ಡಾ.ರಾಜ್‌ಕುಮಾರ್ ನಟಿಸಿರುವ ‘ಬಬ್ರುವಾಹನ’ ಚಿತ್ರವೂ ಸೇರಿದೆ.


ಈ ಬಾರಿ ರಂಗಾಯಣದ ಹೊರಭಾಗದಲ್ಲಿ ಕರಕುಶಲ, ಇತರ ಕಲಾವಸ್ತುಗಳು, ಪರಿಕರಗಳು, ದೇಸಿ ಉಡುಪುಗಳು ಹಾಗೂ ಪುಸ್ತಕಗಳ 64 ಮಳಿಗೆಗಳನ್ನು ತೆರೆಯಲಾಗುತ್ತದೆ. ಜತೆಗೆ 16 ದೇಸಿ ಆಹಾರ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದರು.

ಬಹುರೂಪಿ ಉದ್ಘಾಟನೆ:
ಮಾ. 12ರಂದು ಸಂಜೆ 4.30ಕ್ಕೆ ವನರಂಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗೋತ್ಸವಕ್ಕೆ ವೃಕ್ಷಮಾತೆ ಪದ್ಮಶ್ರೀ ತುಳಸೀಗೌಡ ಚಾಲನೆ ನೀಡಲಿದ್ದಾರೆ. ಕರಕುಶಲ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಚಿತ್ರನಟಿ ಮಾಳವಿಕಾ ಅವಿನಾಶ್ ರಂಗೋತ್ಸವದ ಆಶಯ ನುಡಿಯಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್ ಭಾಗವಹಿಸಲಿದ್ದಾರೆ ಎಂದರು.


ಇದಕ್ಕೂ ಮುನ್ನ ಅಂದು ಬೆಳಗ್ಗೆ 11 ಗಂಟೆಗೆ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಿತ್ರನಟಿ ತಾರಾ ಅನುರಾಧ ಚಾಲನೆ ನೀಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಭಾಗವಹಿಸಲಿದ್ದಾರೆ ಎಂದರು.


ವಿಚಾರ ಸಂಕಿರಣ:
ವನರಂಗದಲ್ಲಿ ಮಾ. 19ರಂದು ‘ತಾಯಿ’ ವಿಷಯವಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣಕ್ಕೆ ಹಿರಿಯ ಸಾಹಿತಿ ನಾ.ಡಿಸೋಜ ಚಾಲನೆ ನೀಡಲಿದ್ದಾರೆ. ಚಿಂತಕಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಭಾಗವಹಿಸಲಿದ್ದಾರೆ. ಬಳಿಕ ‘ಸೃಜನಶೀಲತೆ ಮತ್ತು ತಾಯ್ತನ’ ಕುರಿತು ಗೋಷ್ಠಿ-1 ನಡೆಯಲಿದ್ದು, ರಂಗಕರ್ಮಿ ಅಭಿರುಚಿ ಚಂದ್ರು ವಿಚಾರ ಮಂಡಿಸಲಿದ್ದಾರೆ. ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ನಡೆಯುವ ‘ರೈತ ಮತ್ತು ತಾಯ್ತನ’-ಗೋಷ್ಠಿ-2ರಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹಾಗೂ ಲೇಖಕಿ ಕೆ.ರಾಜಲಕ್ಷ್ಮೀ ವಿಚಾರ ಮಂಡಿಸಲಿದ್ದಾರೆ. ಕರ್ನಾಟಕ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆ.ಆನಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


20ರಂದು ಪದವಿ ವಿದ್ಯಾರ್ಥಿಗಳಿಗೆ ‘ಮನುಕುಲದ ಒಳಿತಿಗೆ ಪ್ರಕೃತಿಯೋ ಪ್ರಗತಿಯೋ’ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. 20ರಂದು ಸಂಜೆ 4.30ಕ್ಕೆ ವನರಂಗದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ‘ಕನ್ನಡ ಕಾವ್ಯಗಳಲ್ಲಿ ತಾಯಿ’ ಕುರಿತು ಹಿರೇಮಗಳೂರು ಕಣ್ಣನ್ ಮತ್ತು ‘ಜಗತ್ತೆಂದರೆ ತಾಯಿ’ ಕುರಿತು ಚಕ್ರವರ್ತಿ ಸೂಲಿಬೆಲೆ ವಿಚಾರ ಮಂಡಿಸಲಿದ್ದಾರೆ ಎಂದರು.

ಜನಪದ ಕಲಾತಂಡಗಳ ವಿವರ:
ಕಿಂದರಿಜೋಗಿ ಜನಪದ ರಂಗದಲ್ಲಿ ಪ್ರತಿದಿನ ಸಂಜೆ 4.30ರಿಂದ ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, 11ರಂದು ಜೋಗತಿ ನೃತ್ಯ, ಪೂಜಾ ಕುಣಿತ, ನಗಾರಿ, 12 ರಂದು ಕಂಸಾಳೆ, ಚಿಲಿಪಿಲಿ ಗೊಂಬೆ, ಚಂಡೆ, ನಾದಸ್ವರ, 13ರಂದು ಸೋಮನ ಕುಣಿತ, ಲಂಬಾಣಿ ಕುಣಿತ, 14 ರಂದು ಮಲ್ಲಕಂಬ, ಬಾಸ್ಟರ್, ಡಾಂಗಾಲಿಯ, ಬಾಗೋಲಿಯ, 15 ರಂದು ವೀರಗಾಸೆ, ಗೊರವರ ಕುಣಿತ, ಬಾಸ್ಟರ್, ಡಾಂಗಾಲಿಯ, ಬಾಗೋಲಿಯ, 16 ರಂದು ಸಿದ್ದಿಕುಣಿತ, ಡೊಳ್ಳು ಕುಣಿತ, ಬಾಸ್ಟರ್, ಡಾಂಗಾಲಿಯ, ಬಾಗೋಲಿಯ, 17 ರಂದು ತಮಟೆ, ಸುಗ್ಗಿ ಕುಣಿತ, ಲಾಯಿ ಪೊರಬ್ಬ, ಕಳರಿಪಯಟ್, 18 ರಂದು ಚಿಟ್‌ಮೇಳ, ಕಂಗೀಲು, ಲಾಯಿ ಪೊರಬ್ಬ, ಕಳರಿಪಯಟ್, 19 ರಂದು ಉಮ್ಮತ್ತಾಟ್, ತಾಶಿರಾಂಡೋಲ್, ಲಾಯಿ ಪೊರಬ್ಬ, ಕಳರಿಪಯಟ್ ಕಲಾ ಪ್ರದರ್ಶನ ನಡೆಯಲಿದೆ.

ನಾಟಕ ಪ್ರದರ್ಶನದ ವಿವರ:
ಭೂಮಿಗೀತ ರಂಗ ವೇದಿಕೆಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. ಮಾ. 12 ರಂದು(ಸಂಜೆ 7.30) ರಂಗಾಯಣ ರೆಪರ್ಟರಿ ತಂಡದ ಹೊಸ ನಾಟಕ ‘ಮಿ.ಬೊಗೀಸ್’ ಪ್ರದರ್ಶನಗೊಳ್ಳಲಿದೆ. 13 ರಂದು ಪಾಂಡಿಚೆರಿ ಆದಿಶಕ್ತಿ ತಂಡದ ಭೂಮಿ(ಇಂಗ್ಲಿಷ್), 14 ರಂದು ರುಡಾಲಿ(ರಾಜಸ್ಥಾನಿ), 15 ರಂದು ಸುರ್ಜ್ಯಾಸ್ತರು ಸೂರ್ಜೋದಯ(ಒರಿಯಾ), 16 ರಂದು ಅಶಾಂತಿ ಪರ್ವ(ಮರಾಠಿ), 17 ರಂದು ಓಲ್ಡ್ ಮ್ಯಾನ್ ಮತ್ತು ಸೀ (ಮಲಯಾಳಂ), 18 ರಂದು ಮನಲೋ ಮನ ಮಾಟ(ತೆಲುಗು), 19 ರಂದು ಷಹೀದ್ ಉದಮ್‌ಸಿಂಗ್ ಆಜಾದ್(ಪಂಜಾಬಿ), 20 ರಂದು ದ ಸ್ಕ್ವೇರ್ ರೂಟ್ ಆಫ್ ಎ ಸಾನೆಟ್(ಇಂಗ್ಲಿಸ್) ನಾಟಕ ಪ್ರದರ್ಶನಗೊಳ್ಳಲಿವೆ.


ಸಂಪತ್ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 12ರಂದು ಕೋಮಲ ಗಾಂಧಾರ (ಕನ್ನಡ), 13 ರಂದು ಬುಢೇ ನೆ ಕಹಾ(ಹಿಂದಿ), 14 ರಂದು ತಾಳಿಯ ತಕರಾರು(ಕನ್ನಡ), 15 ರಂದು ಲಾಕ್‌ಡೌನ್(ಕನ್ನಡ), 16 ರಂದು ಜಾಳ ಪೋಳ(ಕನ್ನಡ), 17 ರಂದು ಪ್ರಾಜೆಕ್ಟ್ ನಗ್ನ(ಕನ್ನಡ), 18 ರಂದು ಎಲ್‌ಎಸ್‌ಡಿ (ಕನ್ನಡ), 19 ರಂದು ಎಕ್ಲೊ ಅನ್ನೆಕ್ಲೊ-ಕರ್ಮಾಧೀನ್(ಕೊಂಕಣಿ), 20 ರಂದು ಕಾಮರೂಪಿಗಳ್(ಕನ್ನಡ) ನಾಟಕ ಪ್ರದರ್ಶನವಾಗಲಿದೆ.


ವನರಂಗದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. 12ರಂದು ಚಕ್ರವ್ಯೆಹ(ಸಂಜೆ 7.30), 13 ರಂದು ಆಟಿ ತಿಂಗಳ್ದ ಒಂಜಿ ದಿನ(ತುಳು), 14 ರಂದು ಕಳುನರಮ್(ತಮಿಳು), 15 ರಂದು ಈಡಿಪಸ್(ಕನ್ನಡ), 16 ರಂದು ಏಸೂರು ಕೊಟ್ಟರೂ ಈಸೂರ ಕೊಡೆವು(ಕನ್ನಡ), 17 ರಂದು ಚದುರಂಗ ಮತ್ತು ಕತ್ತೆ(ಕನ್ನಡ), 18 ರಂದು ವೈಶಂಪಾಯನ ತೀರ(ಕನ್ನಡ), 19 ರಂದು ರಾಧಾ ಮಾಧವ ವಿನೋದಹಾಸ(ಕನ್ನಡ) ನಾಟಕ ಪ್ರದರ್ಶನಗೊಳ್ಳಲಿದೆ.


ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. 13 ರಂದು ಉಚ್ಛಿಷ್ಟ(ಕನ್ನಡ), 14 ರಂದು ಹಕ್ಕಿ ಕಥೆ(ಕನ್ನಡ), 15 ರಂದು ಸಾಮ್ರಾಟ್ ಅಶೋಕ(ಕನ್ನಡ), 16ರಂದು ರಾಮ-ರಾವಣರ ಯುದ್ಧ(ಕನ್ನಡ), 17ರಂದು ವೀರವಿರಾಗಿ ಬಾಹುಬಲಿ(ಕನ್ನಡ), 18 ರಂದು ಶ್ರೀ ಕೃಷ್ಣ ರಾಯಭಾರ(ಕನ್ನಡ), 19 ರಂದು ಆಟದೊಳಗಾಟ(ಕನ್ನಡ) ಹಾಗೂ 20 ರಂದು ಮುಖ್ಯಮಂತ್ರಿ(ಕನ್ನಡ) ನಾಟಕ ಪ್ರದರ್ಶನಗೊಳ್ಳಿದೆ.
ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ವಿಶೇಷ ಕಾರ್ಯಕ್ರಮ ನಡೆಯಲಿದೆ. 11 ಮತ್ತು 12 ರಂದು ಮೈಸೂರಿನ ಬೊಂಬೆ ರಂಗಮನೆ ವತಿಯಿಂದ ‘ನರಕಾಸುರ ವಧೆ’, 13 ರಂದು ಚೆನ್ನೈನ ಕಟ್ಟಿಯಾಕರಿ ತಂಡದಿಂದ ನೂರಮ್ಮ-ಬಿರಿಯಾನಿ ದರ್ಬಾರ್(ತಮಿಳು) ನಾಟಕ ಪ್ರದರ್ಶನ ನಡೆಯಲಿದೆ. 14 ರಂದು ಸಂಜೆ 4 ಗಂಟೆಗೆ ಮೈಸೂರಿನ ದಿಶಾ ಮತ್ತು ತಂಡದಿಂದ ‘ರಂಗಸಂಗೀತ’, 15 ರಂದು ಸಂಜೆ 4 ಗಂಟೆಗೆ ಪ್ರೊ.ಕೃಷ್ಣೇಗೌಡ ಅವರಿಂದ ‘ಮಾತೃ ದೇವೋಭವ’ ಎಂಬ ಹರ್ಷ ನುಡಿ ಕಾರ್ಯಕ್ರಮ ನಡೆಯಲಿದೆ. 16 ರಂದು ಸಂಜೆ 4 ಗಂಟೆಗೆ ತಾಳಮದ್ದಳೆ, 17 ರಂದು ರಂಗಾಯಣ ಕಲಾವಿದರಿಂದ ‘ಇಳಿದು ಬಾ ತಾಯಿ’ ಕಾರ್ಯಕ್ರಮ ಹಾಗೂ 18 ರಂದು ಒರಿಸ್ಸಾ ಕಲಾವಿದರಿಂದ ‘ಗೋಟಿಪೂವ ನೃತ್ಯ’ ಪ್ರದರ್ಶನ ನಡೆಯಲಿದೆ.

ಚಲನಚಿತ್ರ ಪ್ರದರ್ಶನದ ವಿವರ:
ಪ್ರತಿದಿನ ಬೆಳಗ್ಗೆ 10.30 ರಿಂದ ಮ.12, ಮ.12 ರಿಂದ 1.30 ಹಾಗೂ ಮ.2 ರಿಂದ ಸಂಜೆ 4.30ರ ಸಮಯದಲ್ಲಿ ಪ್ರತಿದಿನ ಮೂರು ಚಿತ್ರಗಳ ಪ್ರದರ್ಶನ ನಡೆಯಲಿವೆ. 12 ರಂದು ದ ಸ್ಟೋರಿ ಆಫ್ ಕಾವೇರಿ(ಕೊಡವ ಭಾಷೆ), ಕೇರಿಂಗ್ ಫಾರ್ 7 ಬಿಲಿಯನ್( ಇಂಗ್ಲಿಷ್), ಕುರ್ಮಾಂಜನ್ ದಡ್ಕ(ಕಜಕಿಸ್ತಾನ್), 13 ರಂದು ಮದರ್ ಕರೇಜ್ ಅಂಡ್ ಹರ್ ಚಿಲ್ಡ್ರನ್(ಇಂಗ್ಲಿಷ್), ದ ವರ್ಲ್ಡ್ ಬಿಫೋರ್ ಹರ್(ಇಂಗ್ಲಿಷ್), ಮದರ್ ಇಂಡಿಯಾ(ಹಿಂದಿ), 14 ರಂದು ಬರಾಕ, ಮಾತೃಭೂಮಿ: ಎ ನೇಷನ್ ವಿತೌಟ್ ವುಮೆನ್(ಹಿಂದಿ), ಉನಿಷಿ ಏಪ್ರಿಲ್(ಬೆಂಗಾಲಿ), 15 ರಂದು ಜೇನ್ ಗುಡಾರ್: ದಿ ಹೋಪ್ (ಇಂಗ್ಲಿಷ್), ಹನಿಲ್ಯಾಂಡ್ (ನಾರ್ತ್ ಮೆಸಿಡೋನಿಯಾ), ಮದರ್(ಸೌತ್‌ಕೊರಿಯಾ), 16 ರಂದು ವೊಂಬ್ ಆಫ್ ರೆಂಟ್(ಇಂಗ್ಲಿಷ್), ಬ್ಯಾಲೆಡ್ ಆಫ್ ಎ ಸೋಲ್ಜರ್ (ರಷ್ಯನ್), ಟೂ ವುಮೆನ್(ಇಟಾಲಿಯಾನ್), 17 ರಂದು ಕ್ವೀನ್ ಆಫ್ ಟ್ರೀಸ್(ಇಂಗ್ಲಿಷ್), ಜೋಜೋ ರಾಬಿಟ್ (ನ್ಯೂಜಿಲ್ಯಾಂಡ್), ಚೇಂಜಲಿಂಗ್(ಯು.ಎಸ್.), 18 ರಂದು ಡೈನಾಸ್ಟೀಸ್: ಟೈಗರ್(ಯು.ಕೆ.), ಲೇಸ್ ಇನ್ನೋಸೆಂಟೀಸ್(ಫ್ರಾನ್ಸ್), ರಾಜಕುಮಾರ್(ಕನ್ನಡ), 19 ರಂದು ಮದರ್ ಲ್ಯಾಂಡ್(ಫಿಲಿಪೈನ್), ಅ್ಯಸ್ ಇಫ್ ಐ ಆ್ಯಮ್ ನಾಟ್ ದೇರ್(ಐರ್ಲೆಂಡ್), ಬಬ್ರುವಾಹನ(ಕನ್ನಡ) ಸಿನಿಮಾ ಪ್ರದರ್ಶನವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net