

ಮೈಸೂರು: ನಾವು ಹೇಳಿದ ರೀತಿಯಲ್ಲಿಯೇ ನಾಟಕ ಮಾಡಬೇಕು ಎಂದು ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ರಂಗಕರ್ಮಿಗಳ ಮೇಲೆ ಒತ್ತಡ ಹೇರುವ ಕಾರ್ಯ ಮಾಡುತ್ತಿದೆ ಎಂದು ಅಸ್ಸಾಂನ ರಂಗನಿರ್ದೇಶಕಿ ಭಾಗೀರಥಿಬಾಯಿ ಕದಂ ಅಸಮಾಧಾನ ವ್ಯಕ್ತಪಡಿಸಿದರು.
ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಸಮುದಾಯದತ್ತ ಸಮಕಾಲೀನ ರಂಗಭೂಮಿ’ ವಿಷಯದ ಕುರಿತು ಮಾತನಾಡಿದ ಅವರು, ಇದೇ ರೀತಿಯ ನಾಟಕ ಮಾಡಬೇಕು, ಇಂತಹ ವಿಚಾರಗಳು ಇರಬೇಕು ಎಂದು ರಂಗಕರ್ಮಿಗಳ ಮೇಲೆ ಎನ್‌ಎಸ್‌ಡಿ ವಿಚಾರಗಳನ್ನು ಹೇರುವ ಪ್ರಯತ್ನ ಮಾಡುತ್ತಿದ್ದು, ಇಂತಹ ಹಾನಿಕಾರಕ ವ್ಯವಸ್ಥೆಯಲ್ಲಿ ರಂಗಭೂಮಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಸನಾತನ ಧರ್ಮವನ್ನು ಉಳಿಸಿಕೊಳ್ಳಬೇಕು ಎಂಬ ಪರಿಕಲ್ಪನೆಯಲ್ಲಿ ರಂಗಭೂಮಿಗೆ ಕೋಟ್ಯಾಂತರ ರೂ.ಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸುತ್ತಿದೆ. ಸನಾತನ ಧರ್ಮದ ಕುರಿತು ಬ್ರಹ್ಮಪುತ್ರ ನದಿ ತೀರದಲ್ಲಿ ನಾಟಕವನ್ನು ಸರ್ಕಾರವೇ ಆಯೋಜಿಸಿತ್ತು. ಇದು ಎಷ್ಟರ ಮಟ್ಟಿಗೆ ಸರಿ. ಸಮುದಾಯ ಬಯಸುವ ನಾಟಕವನ್ನು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಂಗನಿರ್ದೇಶಕ ಕೆ.ಪಿ. ಲಕ್ಷ್ಮಣ್ ಮಾತನಾಡಿ, ಜನರು ಇಲ್ಲದೆ ರಂಗಭೂಮಿ ಪರಿಪೂರ್ಣವಾಗಿಲು ಸಾಧ್ಯವಿಲ್ಲ. ಜನರು ರಂಗಭೂಮಿ ಯ ಬಹಳ ಮುಖ್ಯವಾದ ಭಾಗ. ರಂಗಭೂಮಿ ಚಿಕ್ಕದು, ಸಮುದಾಯ ಬಹಳ ದೊಡ್ಡದು. ಹಾಗಾಗಿ ರಂಗಭೂಮಿ ಸಮುದಾಯದತ್ತ ಹೋಗುವ ಪ್ರಯತ್ನ ಮಾಡಬೇಕು ಎಂದರು. ವೇದಿಕೆಯಲ್ಲಿ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಇದ್ದರು.