

ಮೈಸೂರು: ಇಂದಿಗೂ ನಾವು ಸಾಂಸ್ಕೃತಿಕ ದಾಸ್ಯದಲ್ಲಿ ಬದುಕು ನಡೆಸುತ್ತಿದ್ದೇವೆ. ಈ ಸಾಂಸ್ಕೃತಿಕ ದಾಸ್ಯದಿಂದ ಹೊರ ಬರಬೇಕಾದರೆ ನಮಗೆ ಶರಣ ಚಿಂತನೆಗಳ ಅವಶ್ಯಕತೆ ಇದೆ ಎಂದು ಕವಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ನಮ್ಮ ಮೇಲೆ ಸಾಂಸ್ಕೃತಿಕ ಜೀತವನ್ನು ಹೇರಲಾಗುತ್ತಿದ್ದು, ಈ ಜೀತದಿಂದ ನಮಗೆ ಬಿಡುಗಡೆ ದೊರೆಯಬೇಕಾದರೆ ನಾವು ಶರಣರನ್ನು ಅನುಸರಿಸಬೇಕು ಎಂದರು.
ವೈದಿಕ ಪಠ್ಯವನ್ನು ಶರಣರು ನಿರಾಕರಿಸಿದರು, ವೇದಗಳನ್ನು ನಿರಾಕರಿಸಿದರು. ಆದರೆ, ಉಪನಿಷತ್ ಜೀವ ಪರವಾಗಿರುವ ಹಿನ್ನೆಲೆಯಲ್ಲಿ ಶರಣರು ಉಪನಿಷತ್‌ಅನ್ನು ನಿರಾಕರಿಸಲಿಲ್ಲ. ಈ ರೀತಿಯ ನಿರಾಕರಣೆಯಿಂದ ಶಣರು ಸಾಂಸ್ಕೃತಿಕ ಜೀತದಿಂದ ಹೊರಬಂದು ಹೊಸ ಜೀವನ ಕಟ್ಟುವ ಕಾರ್ಯ ಮಾಡಿದರು. ಸಾಂಸ್ಕೃತಿಕ ಜೀತದ ಬಿಡುಗಡೆಗೆ 12ನೇ ಶತಮಾನದಲ್ಲಿ ಶರಣರು ಮಾಡಿದ ಪ್ರಯತ್ನವನ್ನು ಪ್ರಸ್ತುತ ರಂಗಭೂಮಿ ಮಾಡಬೇಕು ಎಂದು ಸಲಹೆ ನೀಡಿದರು.
ಬಹುತ್ವದ ಭಾರತದಲ್ಲಿ ಬಹುಸಂಸ್ಕೃತಿಯನ್ನು ಗೌರವಿಸುವ ನೆಲೆ ಏನಾದರು ಇದ್ದರೆ ಆ ನೆಲೆ ಜಾತಿಯ ನೆಲೆಯಲ್ಲ, ಅದು ಕಾಯಕದ ನೆಲೆ. ಮೊದಲು ಈ ಸತ್ಯವನ್ನು ಕಂಡುಕೊಂಡವರು ಶರಣರು. ಇಂದಿಗೂ ವರ್ಣ ವ್ಯವಸ್ಥೆ ಇದ್ದು, ನಾವು ಸಾಂಸ್ಕೃತಿಕ ಜೀತದಾಳುಗಳಾ ಗಿಯೇ ಬದುಕುವಂತೆ ಮಾಡಲು ನಮ್ಮ ಮೇಲೆ ಹಲವು ನಂಬಿಕೆಗಳನ್ನು ಹೇರಲಾಗುತ್ತಿದೆ. ನಾವು ನಮ್ಮ ತನವನ್ನು ಕಳೆದುಕೊಂಡಿದ್ದೇವೆ ಎಂದು ಬೇಸರಿಸಿದರು.
‘ಇವ ನಮ್ಮವ’ ಎನ್ನುವ ಘೋಷಣೆ ಕೇವಲ ಘೋಷಣೆಯಲ್ಲ, ಅದು ಬಹುತ್ವ ಭಾರತದ ಪ್ರತೀಕ. ಬಹುತ್ವ ಭಾರತದ ಪ್ರತೀಕ ಬಸವಣ್ಣನೇ ಹೊರತು ‘ಹಿಂದುತ್ವದ ರಾಮ’ನಲ್ಲ. ಏಕೆಂದರೆ ‘ಹಿಂದುತ್ವದ ರಾಮ’ ಧ್ವೇಷ ರಾಜಕಾರಣವನ್ನು ಬೆಳೆಸುತ್ತಿದೆ. ಆದರೆ, ಬಸವತತ್ವ ಪ್ರಿತಿಯನ್ನು ಬೆಳೆಸುವ ಗುಣ ಹೊಂದಿದೆ. ಬಸವತತ್ವದಲ್ಲಿ ಬಹುತ್ವದ ಗುಣ ಇದೆ ಎಂದರು.
ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುರುಕುಲವನ್ನು ಪ್ರಸ್ತಾಪಿಸಲಾಗಿದೆ. ಗುರುಕುಲ ಅಂದರೆ ಯಾವುದು? ಶೂದ್ರರಿಗೆ ಶಿಕ್ಷಣ ವನ್ನು ವಂಚಿಸಿದ್ದೇ ಗುರುಕುಲ. ಈ ಗುರುಕುಲ ವ್ಯವಸ್ಥೆಗೆ ವಿರುದ್ಧವಾಗಿ ಶರಣರು ಶಾಲೆಗಳನ್ನು ತೆರೆದರು. ಹಾಗಾಗಿ ಗುರುಕುಲ ಎಂಬ ಪದ ಭ್ರಷ್ಟಗೊಂಡ ಶಬ್ದ ಹಾಗೂ ಅಸಮಾನತೆಯ ಶಬ್ದವಾಗಿದೆ ಎಂದು ಟೀಕಿಸಿದರು.
ವೇದಿಕೆಯಲ್ಲಿ ರಂಗಾಯಣ ನಿರ್ದೇಶಕಿ ನಿರ್ಮಲ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.