

ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅಮಿತ್ ಷಾ ದೇಶದ ಜನರ ಕ್ಷಮೆಯಾಚಿಸಬೇಕು. ಹಾಗೂ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಜಮಾಯಿಸಿದ ಕಾರ್ಯಕರ್ತರು, ಅಮಿತ್ ಷಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ರವಾನಿಸಿದರು. ಸಂವಿಧಾನ ಜಾರಿಯಾಗಿ 75 ವರ್ಷ ಸಂದ ಹಿನ್ನಲೆಯಲ್ಲಿ ಸಂಸತ್‌ನ ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಮಿತ್ ಷಾ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಜತೆಗೆ ಗೃಹ ಸಚಿವರ ಹುದ್ದೆಯ ಘನತೆಗೂ ಅಗೌರವ ತೋರಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಎಂದೆಂದಿಗೂ ಜನರಿಗೆ ಸರ್ವಸ್ವ, ದೇಶದ ಶೋಷಿತರು, ಶೂದ್ರರು, ಮಹಿಳೆಯರು ಅಲ್ಪಸಂಖ್ಯಾತರು ಸೇರಿದಂತೆ ಸರ್ವ ಜನಾಂಗಕ್ಕೂ ನ್ಯಾಯ ಬದ್ಧ ಹಕ್ಕು, ಅಧಿಕಾರ, ಉದ್ಯೋಗ ದೊರಕಿರುವುದ ಅವರ ಹೋರಾಟದ ಪ್ರತಿಫಲ. ಹಾಗಾಗಿ ಅವರು ನಮಗೆಲ್ಲ ಸ್ಫೂರ್ತಿದಾತರು, ಮಾರ್ಗದಾತರು ಎಂಬುದನ್ನು ಅರಿಯಬೇಕು. ಸಂವಿಧಾನ ಮತ್ತು ಬಾಬಾ ಸಾಹೇಬರ ಬಗ್ಗೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಅಸಹನೆ ಹೊಂದಿರುವುದು ಅನೇಕ ಬಾರಿ ಸಾಬೀತಾಗಿದೆ. ಈಗ ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಅವರಿಗೆ ಸಚಿವರಾಗಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಚೆಲುವರಾಜು, ಜಿಲ್ಲಾ ಸಂಯೋಜಕ ಕೆ.ಎಚ್.ಮಹಾದೇವು, ಜಿಲ್ಲಾಧ್ಯಕ್ಷ ಎಸ್.ಶಿವಶಂಕರ, ನಂಜುಂಡಸ್ವಾಮಿ, ಶಂಕರ್, ದಿನೇಶ್, ವೀರಭದ್ರ, ಸತೀಶ್, ಮಹಮ್ಮದ್ ಹನೀಫ್, ದೇವರಾಜು, ಬಸವರಾಜು ಇತರರಿದ್ದರು.