

ವಿಜಯಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನ(ಎಸ್‌ಸಿಎಸ್‌ಪಿ-ಟಿಎಸ್‌ಪಿ)ವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ ಬಹುಜನ ದಲಿತ ಸಂಘರ್ಷ ಸಮಿತಿ (ಉತ್ತರ ಕರ್ನಾಟಕ) ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ಅಧ್ಯಕ್ಷ ರಾಜಶೇಖರ ಕುದರಿ ಮಾತನಾಡಿ, ಎಸ್ಸಿ-ಎಸ್ಟಿ ಕಲ್ಯಾಣಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ. ಸರ್ಕಾರದ ಈ ಕ್ರಮ ಖಂಡನೀಯ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳು ಕಳೆಯುತ್ತಾ ಬಂದರೂ ಎಸ್ಸಿ-ಎಸ್ಟಿ ಸಮುದಾಯದಲ್ಲಿ ಇನ್ನೂ ಅನೇಕರು ಏಳಿಗೆ ಸಾಧಿಸಲಾಗಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಸಮಾನತೆ ಇನ್ನೂ ಮರೀಚಿಕೆಯಾಗಿದೆ. ಸಾಮಾಜಿಕ ಬಹಿಷ್ಕಾರ ನಿಂತಿಲ್ಲ. ಮೌಢ್ಯತೆ ತೊಲಗಿಲ್ಲ. ಹೀಗಾಗಿ ಇಂಥ ಸಮುದಾಯ ಏಳಿಗೆ ಸಾಧಿಸಲು ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆ ರೂಪಿಸಿದೆ. ಇದೀಗ ಆ ಯೋಜನೆಯ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಸುವುದರಿಂದ ದಲಿತ, ಶೋಷಿತ ಸಮುದಾಯಗಳಿಗೆ ಸಾಕಷ್ಟು ಅನ್ಯಾಯವಾಗಲಿದೆ ಎಂದರು.
ಎಸ್ಸಿ-ಎಸ್ಟಿ ಸಮುದಾಯಗಳಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಅಂಥದರಲ್ಲಿ ಇರುವ ಅನುದಾನ ಅನ್ಯ ಕಾರ್ಯಗಳಿಗೆ ಬಳಸಬಾರದು. ಬದಲಾಗಿ ಇನ್ನಷ್ಟು ಅನುದಾನ ಒದಗಿಸುವ ಕೆಲಸವಾಗಬೇಕು. ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು. ಪೂರಕ ಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ಮೀಸಲು ಅನುದಾನವನ್ನು ಅನ್ಯಕಾರ್ಯಕ್ಕೆ ಬಳಸಬಾರದೆಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಪರಶುರಾಮ ಘರಸಂಗಿ, ಜಿಲ್ಲಾಧ್ಯಕ್ಷ ರಾಜಕುಮಾರ ಶಿಂದ್ರೆ, ಉತ್ತರ ಕರ್ನಾಟಕ ಉಪಾಧ್ಯಕ್ಷ ಅಶೋಕ ಸಿಂಗೆ, ಜಿಲ್ಲಾ ಗೌರವ ಅಧ್ಯಕ್ಷ ಯಮನಪ್ಪ ಗುಣಕಿ, ತಾಲೂಕಾಧ್ಯಕ್ಷ ಸಂತೋಷ ಬಡಳ್ಳಿ, ವಿದ್ಯಾರ್ಥಿ ಘಟಕ ಅಧ್ಯಕ್ಷ ಸತೀಶ ಸಿಂಗೆ, ಸದಸ್ಯ ನಾಗಪ್ಪ ಹೊಸಮನಿ ಮತ್ತಿತರರಿದ್ದರು.