

ಕಾರ್ಕಳ: ವಿಶ್ವದ ವಿಶಿಷ್ಟ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ಬಾಹುಬಲಿಯ ಪದತಲದಲ್ಲಿ ಮುಹೂರ್ತ ನೆರವೇರುವುದು ಒಂದು ಐತಿಹಾಸಿಕ ಕ್ಷಣ ಎಂದು ಕನ್ನಡ-ತುಳು ಸಾಹಿತಿ ನಂದಳಿಕೆ ನಾರಾಯಣ ಶೆಟ್ಟಿ ಮುಂಬೈ ಅಭಿಪ್ರಾಯಪಟ್ಟರು. 12ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮುಹೂರ್ತ, ಶ್ರೀ ಗೊಮ್ಮಟೇಶ್ವರ ಪಾದಪೂಜೆ, ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂಬೈಯಲ್ಲಿ ಹೋಟೆಲ್ ಕಾರ್ಮಿಕರಿಗೆ ಗೌರವ ತರುವ ಉದ್ದೇಶದಿಂದ ಅವರಿಗೆ ಸಾಂಸ್ಕೃತಿಕ ಸ್ಪರ್ಧೆ, ಕಥೆ, ಕವನ, ಪ್ರಬಂಧ ಸ್ಪರ್ಧೆಗಳನ್ನು ನಡೆಸಿ ಹೊಸತನ ಮೆರೆದಿದ್ದ ಶೇಖರ ಅಜೆಕಾರು ಅವರ ವಿಶಿಷ್ಟ ಪರಿಕಲ್ಪನೆಯ ಬೆಳದಿಂಗಳ ಸಮ್ಮೇಳನ ನಿರಂತರವಾಗಿ ನಡೆಯಲಿ ಎಂದರು.
ಗೊಮ್ಮಟೇಶ್ವರ ಬೆಟ್ಟದ ಪ್ರಧಾನ ಅರ್ಚಕ ಸಿದ್ಧಾರ್ಥ ಇಂದ್ರ ಪಾದಪೂಜೆ ನೆರವೇರಿಸಿದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಶೇಖರ ಅಜೆಕಾರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಗೋರೂರು ಘಟಕದ ಸಂಚಾಲಕಿ ರೇಶ್ಮಾ, ಸ್ವಸ್ತಿಕ್ ಪ್ರೊಡಕ್ಷನ್‌ನ ಸುರೇಂದ್ರ ಮೋಹನ್ ಮುದ್ರಾಡಿ, ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಆಡಳಿತಾಧಿಕಾರಿ ನರೇಂದ್ರ ಎಸ್. ಸದಾಶಿವ ಶೆಟ್ಟಿ, ಲೇಖಕ ದೊರೈಸ್ವಾಮಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು, ಸಮಿತಿ ಸದಸ್ಯರಾದ ಶಶಿಕಲಾ ಜೆ.ಕೆ.ಬೆಳುವಾಯಿ, ಸಂತೋಷ ಜೈನ್ ಮೊದಲಾದವರಿದ್ದರು.
ಹಿರಿಯ ತ್ರಿಭಾಷಾ ಕವಿ ಕಾಂತಾವರ ಶಿವಾನಂದ ಶೆಣೈ ಅವರು ಗೊಮ್ಮಟೇಶ್ವರ ವರ್ಣನೆಯ ಕವಿತೆ ಹಾಡಿದರು. ಬಾಲ ಕಲಾವಿದರಾದ ತನುಶ್ರೀ ಮಂಗಳೂರು, ಶೃಜನ್ಯ ಜೆ.ಕೆ.ಬೆಳುವಾಯಿ, ಪ್ರಥಮ್ ಮಾರೂರು, ತನಿಶಾ ಕಾರ್ಕಳ, ಸುನಿಧಿ ಎಸ್, ಸುನಿಜಾ ಅಜೆಕಾರು ಮತ್ತು ಆಗಮ ಜೈನ್ ಸಂಗೀತ, ನೃತ್ಯ, ಯಕ್ಷ ನೃತ್ಯ ಮಾಡಿ ಗಮನ ಸೆಳೆದರು.