

ಕೊಪ್ಪಳ: ಬಹದ್ದೂರಬಂಡಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚೀನತೆ, ಇತಿಹಾಸ, ಸಂಸ್ಕೃತಿ ವಿಶಾಲವಾಗಿದ್ದರೂ ನಿರ್ಲಕ್ಷೃಕ್ಕೆ ಒಳಗಾಗಿದೆ ಎಂದು ವಕೀಲ, ಉತ್ಸವದ ಸರ್ವಾಧ್ಯಕ್ಷ ಎ.ವಿ.ಕಣವಿ ಅಭಿಪ್ರಾಯಪಟ್ಟರು.
ತಾಲೂಕಿನ ಬಹದ್ದೂರ ಬಂಡಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊದಲ ಉತ್ಸವದಲ್ಲಿ ಮಾತನಾಡಿದರು.
ಎಲ್ಲ ಜಾತಿ, ಧರ್ಮದವರನ್ನು ಹೊಂದಿರುವ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಬಂಜಾರ ಸಮುದಾಯದ ಬಹುಮುಖ್ಯ ಸ್ಥಾನವಾಗಿ ಗುರುತಿಸಿಕೊಂಡಿದೆ. ದೇಶದ ಲಂಬಾಣಿ ಸಮುದಾಯದ ಜನರು ಹೋಳಿ ಹಬ್ಬ ಆಚರಣೆಗೆ ಇಲ್ಲಿಗೆ ಆಗಮಿಸುವುದು ವಿಶೇಷ.
ಕೋಟೆಯೂ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಅನೇಕ ಶಿಲಾ ಶಾಸನ, ಸ್ಮಾರಕಗಳಿವೆ. ಇವುಗಳನ್ನು ಉಳಿಸುವ ಕೆಲಸವಾಗಬೇಕು. ನೆಲ, ಜಲ, ಭಾಷೆ ಉಳಿಸುವಲ್ಲಿ ಯುವಕರು ಹೋರಾಟಕ್ಕಿಳಿಯಬೇಕೆಂದು ಕರೆ ನೀಡಿದರು.
ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ಜನರೆಲ್ಲ ಸ್ವಯಂ ಪ್ರೇರಣೆಯಿಂದ ಉತ್ಸವ ಆಚರಿಸುತ್ತಿರುವುದು ಉತ್ತಮ ಕೆಲಸ. ಈ ನೆಪದಲ್ಲಿ ಯುವಕರಿಗೆ ಇತಿಹಾಸ ತಿಳಿಸಲು ಮುಂದಾಗಿರುವುದು ಪ್ರಶಂಸನೀಯ. ನಮ್ಮ ಜನ ಮೊದಲು ನಮ್ಮ ಇತಿಹಾಸ ತಿಳಿಯಬೇಕು. ಬಹದ್ದೂರ ಬಂಡಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸಗಳಾಗಲಿ ಎಂದರು.
ಮಂಜುಳಾ ಕರಡಿ ಮಾತನಾಡಿ, ಬಹದ್ದೂರ ಬಂಡಿ ಗಂಡುಗಲಿಗಳ ನಾಡು. ಸರ್ವ ಧರ್ಮಗಳ ಗ್ರಾಮ. ಪೇಶವ, ಮರಾಠರು, ನಿಜಾಮರು ಸೇರಿ ಹಲವು ರಾಜ ಮನೆತನಗಳು ಆಡಳಿತ ನಡೆಸಿವೆ ಎಂದರು.
ಕೊಪ್ಪಳ ನಗರಸಭೆ ಸದಸ್ಯ ಅಮ್ಜದ್ ಪಟೇಲ್, ತಾಲೂಕು ರಂಗ ಕಲಾವಿದರ ಸಂಘದ ಉಪಾಧ್ಯಕ್ಷ ಚಾಂದಪಾಷ ಕಿಲ್ಲೇದಾರ ಮಾತನಾಡಿದರು.
ಸೇವಾಲಾಲ್ ಸಮುದಾಯ ಗುರುಗಳಾದ ಮಂಜುನಾಥ ಜಯಚಂದ್ರಗಿರಿ, ಇಮ್ಯಾನ್ಯುವೆಲ್ ಚರ್ಚ್‌ನ ಫಾಸ್ಟರ್ ಜಯರಾಜ್ ಸಾನ್ನಿಧ್ಯ ವಹಿಸಿದ್ದರು.
ಚುಸಾಪ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಅಂಡಗಿ, ಸಾಹಿತಿ ವೀರಣ್ಣ ನಿಂಗೋಜಿ, ಕಾಂಗ್ರೆಸ್ ಮುಖಂಡ ತೋಟಪ್ಪ ಕಾಮನೂರು, ಉದ್ಯಮಿ ಬಸವರಾಜ ಬಳ್ಳೊಳ್ಳಿ, ಗ್ರಾಮ ಲೆಕ್ಕಿಗ ಆಸಿಫ್ ಅಲಿ, ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯ ಉಪಾಧ್ಯಕ್ಷ ಭರತ್ ನಾಯ್ಕ ಇತರರಿದ್ದರು.
ಅದ್ದೂರಿ ಮೆರವಣಿಗೆ: ಗ್ರಾಮದ ಹಿರೇಮಸೂತಿ ಆವರಣದಿಂದ ದ್ಯಾಮವ್ವನಗುಡಿ, ರಾಜಭಕ್ಷಿ ದರ್ಗಾ ಮಾರ್ಗವಾಗಿ ಅಗಸಿ ಬಾಗಿಲು, ಸಂಗೊಳ್ಳಿ ರಾಯಣ್ಣ ವೃತ್ತದ ಸೇವಾಲಾಲ್ ಭವನದವರೆಗೆ ಅದ್ಧೂರಿ ಮೆರವಣಿಗೆ ಜರುಗಿತು.
ಯುವಕರ ಕೋಲಾಟ ನೃತ್ಯ, ಮಹನೀಯರ - ದೇವತೆಗಳ ಛದ್ಮವೇಷ ತೊಟ್ಟಿದ್ದ ಮಕ್ಕಳು, ಮೋಜಿನಗೊಂಬೆ, ಡೊಳ್ಳು ಕುಣಿತ ಹಾಗೂ ನಾನಾ ಕಲಾ ತಂಡಗಳು ಗಮನ ಸೆಳೆದವು.
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಗಮಿಸಿ ಶುಭ ಕೋರಿದರು. ಸಂಜೆ ದರ್ಗಾ ಆವರಣದಲ್ಲಿ ಗ್ರಾಮದ ಯುವಕರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗಮನ ಸೆಳೆದ ಗೋಷ್ಠಿಗಳು: ‘ಬಹದ್ದೂರಬಂಡಿ ಕೋಟೆ: ಚಾರಿತ್ರಿಕ ಪರಂಪರೆ’ ವಿಷಯ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಜಾಜಿ ದೇವೆಂದ್ರಪ್ಪ ಆಶಯ ನುಡಿಗಳನ್ನಾಡಿದರು. ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ವಿಷಯ ಮಂಡಿಸಿದರು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿಕೊಂಡರು.
‘ಬಹದ್ದೂರ ಬಂಡಿ : ಸಾಂಸ್ಕೃತಿಕ ಪರಂಪರೆ’ ವಿಷಯವಾಗಿ ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡ ಅಧ್ಯಕ್ಷತೆಯಲ್ಲಿ, ದಂತವೈದ್ಯ ಡಾ.ಶಿವಕುಮಾರ ಮಾಲಿಪಾಟೀಲ್ ಆಶಯ ನುಡಿ ಹೇಳಿದರೆ, ಸಾಹಿತಿ ರಮೇಶ ಬನ್ನಿಕೊಪ್ಪ ವಿಷಯ ಮಂಡಿಸಿದರು.