

ಹೊನ್ನಾಳಿ: ಕಳೆದ 20 ದಿನಗಳಿಂದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಅವಳಿ ತಾಲೂಕಿನಾದ್ಯಂತ ವ್ಯಾಪಕವಾಗಿ ಸುರಿದ ಮಳೆ ಹಾಗೂ ತುಂಗಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಹಿನ್ನ್ನೆಲೆಯಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರೆಗೆ ತಾಲೂಕು ಬಿಜೆಪಿ ಮುಖಂಡರು ಗುರುವಾರ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎ.ಬಿ. ಹನುಮಂತಪ್ಪ ಮಾತನಾಡಿ, ಕಳೆದ ವರ್ಷ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಆದರೆ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜನ, ಜಾನುವಾರುಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಧಾರಾಕಾರ ಮಳೆಯಿಂದ ಅವಳಿ ತಾಲೂಕಿನಾದ್ಯಂತ ಅನೇಕ ಮನೆಗಳು ಬಿದ್ದಿದ್ದು, ಸರ್ಕಾರ ಈ ಕೂಡಲೇ ಮನೆ ಕಟ್ಟಿಕೊಳ್ಳಲು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಕೆ.ವಿ. ಚನ್ನಪ್ಪ, ಯಕ್ಕನಹಳ್ಳಿ ಜಗದೀಶ್, ಜಿಪಂ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಜಿಪಂ ಮಾಜಿ ಸದಸ್ಯ ಎಂ.ಆರ್. ಮಹೇಶ್, ಅಜೆಯ್‌ರೆಡ್ಡಿ, ದೇವರಾಜ್ ಇತರರು ಇದ್ದರು.