

ಹಗರೆ: ಸೌಮ್ಯಕೇಶವನ ಆರ್ಶೀವಾದದಿಂದ ಇಂದು ನಾನು ಶಾಸಕನಾಗಿದ್ದೇನೆ. ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿದ್ದು ತಾಲೂಕಿನ ಸಹೋದರಿಯರಿಗೆ ಅಣ್ಣನಾಗಿ, ತಮ್ಮನಾಗಿ ಬಾಗಿನ ಅರ್ಪಿಸುತ್ತಿದ್ದೇನೆ ಎಂದು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.
ಹಗರೆ ಸಮೀಪದ ಮಾದೀಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಹಾಗೂ ಶಾಸಕರ ಅಭಿಮಾನಿಗಳು ಹಮ್ಮಿಕೊಂಡಿದ್ದ ಎಚ್.ಕೆ. ಸುರೇಶ್ ಅವರ 53ನೇ ಜನ್ಮದಿನದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಸೌಮ್ಯಕೇಶವ ಸ್ವಾಮಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿ ಮಾತನಾಡಿದರು.
ಕಳೆದ ವರ್ಷ ಇದೇ ರೀತಿ ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ಬಾಗಿನ ನೀಡಿದ್ದೆ. ಕೆಲವರು ಇದು ರಾಜಕೀಯ ಪ್ರೇರಿತ ಎಂದಿದ್ದರು. ಆದರೆ ನಾನು ನನ್ನ ತಾಲೂಕಿನ ಸಹೋದರಿಯರಿಂದ ಅಣ್ಣನ ಸ್ಥಾನ ಪಡೆದಿದ್ದು, ಅವರಿಗೆ ಒಂದು ಗೌರವ ಸ್ಥಾನ ಉಳಿಸಿಕೊಳ್ಳುತ್ತಿದ್ದೇನೆ ಎಂದರು.
ಕಳೆದ ವರ್ಷ ಈ ದೇವಸ್ಥಾನದಿಂದಲೇ ಪ್ರಾರಂಭ ಮಾಡಿದ್ದು ದಾರಿಯಲ್ಲಿ ಇನ್ನಿತರ ಸ್ಥಳದಲ್ಲಿ ಕೊಡುವ ಬದಲು ಪ್ರತಿ ಮನೆಗೆ ತೆರಳಿ ಗೌರವಿತವಾಗಿ ತಲುಪಿಸುತ್ತಿದ್ದೇನೆ ಎಂದ ಅವರು, ಮಾದೀಹಳ್ಳಿ ಹೋಬಳಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ತಾಲೂಕು ಬಿಜೆಪಿ ಉಪಾಧ್ಯಕ್ಷ ಡಿಶಾಂತ್ ಕುಮಾರ್ ಮಾತನಾಡಿ, ತಾಲೂಕಿನ ಒಟ್ಟು 550 ಗ್ರಾಮಗಳ 70 ಸಾವಿರ ಮನೆಗಳಿಗೆ ಶಾಸಕರ ಪರವಾಗಿ ನಾವು ಬಾಗಿನ ಕೊಡುತ್ತಿದ್ದೇವೆ. ಇದರಿಂದ ಶಾಸಕ ಎಚ್.ಕೆ.ಸುರೇಶ್ ಅವರಿಗೆ ಸಹೋದರಿಯರು ಹಾಗೂ ತಾಯಂದಿರ ಆಶೀರ್ವಾದ ದೊರಕಲಿ, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಶ್ರಮಿಸುವಂತೆ ಶಕ್ತಿಯನ್ನು ದೇವರು ಕರುಣಿಸಲಿ ಎಂದರು.
ಹಗರೆ ಗ್ರಾಮ ಪಂಚಾಯಿತಿ ವಾಟರ್‌ಮನ್‌ಗಳಿಗೆ ಸನ್ಮಾನಿಸಲಾಯಿತು. ಶಾಸಕ ಎಚ್.ಕೆ.ಸುರೇಶ್ ಅವರನ್ನು ಹಗರೆಯಲ್ಲಿ ಪುಷ್ಪಾರ್ಚನೆ ಮಾಡುವುದರ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡು ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೇಶ್, ಸದಸ್ಯ ಮಂಜುನಾಥ್, ರಾಜಯ್ಯ, ಮಾದೀಹಳ್ಳಿ ಗ್ರಾಮದ ಶ್ರೀನಿವಾಸ್ ಐಯ್ಯಂಗಾರ್, ಬಿಜೆಪಿ ಮುಖಂಡ ದಿನೇಶ್, ಲೋಕೇಶ್, ಗೋಪಿ, ದಿಲೀಪ್‌ಕುಮಾರ್, ಛಲವಾದಿ ಪುಟ್ಟರಾಜು, ಶ್ರೀನಿವಾಸ್, ನವೀನ್, ಜೆಡಿಎಸ್ ಹೋಬಳಿ ಅಧ್ಯಕ್ಷ ಆನಂದ್ ಇನ್ನಿತರರು ಭಾಗವಹಿಸಿದ್ದರು.