ಜಲಾಶಯಕ್ಕೆ ಕಾಂಗ್ರೆಸ್‌ನಿಂದ ಬಾಗಿನ

27 ಎಸ್ಕೆಪಿ 1
ಶಿಕಾರಿಪುರದ ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳಿಗೆ ಕಾಂಗ್ರೆಸ್ ಪ್ರಮುಖರು ಬಾಗಿನ ಅರ್ಪಿಸಿದರು. ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ, ಕಮಲಮ್ಮ ಹುಲ್ಮಾರ್, ಗೋಣಿ ಪ್ರಕಾಶ್, ಜಯಶ್ರೀ ಹೇಮರಾಜ್, ಪುಷ್ಪಾ ಶಿವಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎನ್ನುತ್ತಿದ್ದರು. ಆದರೆ ಇದೀಗ ಸಮೃದ್ಧ ಮಳೆ, ಬೆಳೆಯಾಗಿದ್ದು ಜಲಾಶಯಗಳೆಲ್ಲ ತುಂಬಿ ಹರಿಯುತ್ತಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ತಿಳಿಸಿದರು.
ಗುರುವಾರ ಶಿಕಾರಿಪುರ ತಾಲೂಕು ಕಾಂಗ್ರೆಸ್ ಘಟಕದಿಂದ ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳಿಗೆ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಮಾತನಾಡಿ, ಪ್ರಕೃತಿ ಯಾರ ಕೈಯ್ಯಲೂ ಇಲ್ಲ. ಅನಗತ್ಯವಾದ ಆರೋಪ ಸರಿಯಲ್ಲ. ರೈತರು ಅತ್ಯಂತ ಸಂತಸದಲ್ಲಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಸದೃಢವಾಗಿದೆ. ಐದು ವರ್ಷವನ್ನು ಈ ಸರ್ಕಾರ ಪೂರ್ಣಗೊಳಿಸುತ್ತದೆ. ಊಹಾಪೋಹಗಳು ಎಲ್ಲ ಸರ್ಕಾರಗಳಿದ್ದಾಗಲೂ ಸರ್ವೇ ಸಾಮಾನ್ಯ. ಈಗಾಗಲೇ ಸರ್ಕಾರ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಭಾರೀ ಸ್ಪಂದನೆ ದೊರಕಿದೆ. ಹೆಣ್ಣುಮಕ್ಕಳು ಬಹಳ ಖುಷಿಯಾಗಿದ್ದಾರೆ. ಈ ಸರ್ಕಾರ ಬಡವರ ಸರ್ಕಾರ. ಹಿಂದುಳಿದವರ, ಉಪೇಕ್ಷಿತರ, ಕಾರ್ಮಿಕ ವರ್ಗದವರ ಹಿತ ಕಾಯುತ್ತಿರುವ ಸರ್ಕಾರ ಎಂದು ಬಣ್ಣಿಸಿದರು.
ಬಡವರ ಕಾಮಧೇನು ಆಗಿರುವ ಇಂದಿರಾ ಕ್ಯಾಂಟೀನ್ ಶಿಕಾರಿಪುರಕ್ಕೆ ಬರಲಿದೆ. ಇದರಿಂದ ಬಡ ಕೂಲಿ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಕೆಲವರು ಕಾಂಗ್ರೆಸ್‌ನಿಂದ ಉಪಕಾರ ಪಡೆದು, ನಂತರ ಅನಗತ್ಯವಾಗಿ ಪಕ್ಷವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು, ಎನ್ನುವುದು ಅವರ ಸ್ಮರಣೆಯಲ್ಲಿರಬೇಕು ಎಂದರು.
ಪುರಸಭೆ ಸದಸ್ಯರಾದ ಉಳ್ಳಿ ದರ್ಶನ, ಕಮಲಮ್ಮ ಹುಲ್ಮಾರ್, ಗೋಣಿ ಪ್ರಕಾಶ್, ಜಯಶ್ರೀ ಹೇಮರಾಜ್, ಪುಷ್ಪಾ ಶಿವಕುಮಾರ್, ಭಂಡಾರಿ ಮಾಲತೇಶ್, ಬಾಬು ಪಟೇಲ್, ಗುಡ್ಡಳ್ಳಿ ಸುರೇಶ್, ನಾಗರಾಜ್ ಬನ್ನೂರು, ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net