ಮಹಿಳಾ ಪೌರಕಾರ್ಮಿಕರಿಗೆ ಬಾಗಿನ

SRP_04-02jpj
ಪಟ್ಟಣ ಪುರಸಭೆಯ ಆವರಣದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಹಿಳಾ ಪೌರ ಕಾರ್ಮಿಕರಿಗೆ ಅಧ್ಯಕ್ಷ ಚಂದಗಾಲು ಶಂಕರ್ ಹಾಗೂ ಲಯನ್ ಸರಸ್ವತಿ ಅವರ ನೇತೃತ್ವದಲ್ಲಿ ಬಾಗಿನ ನೀಡಿ, ಶುಭಕೋರಲಾಯಿತು.
Published on

ಶ್ರೀರಂಗಪಟ್ಟಣ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಕ್ಷಣ ವೇದಿಕೆ(ಶಿವರಾಮೇಗೌಡ ಬಣ) ವತಿಯಿಂದ ಪುರಸಭೆಯ ಮಹಿಳಾ ಪೌರಕಾರ್ಮಿಕರಿಗೆ ಸೀರೆಯೊಂದಿಗೆ ಬಾಗಿನ ನೀಡಿ ಗೌರವಿಸಲಾಯಿತು.


ಪಟ್ಟಣ ಪುರಸಭೆಯ ಆವರಣದಲ್ಲಿ ಸುಮಾರು 25ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿಗೆ ಕರವೇ ಅಧ್ಯಕ್ಷ ಚಂದಗಾಲು ಶಂಕರ್ ಹಾಗೂ ಕಸಾಪ ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ ಅವರೊಂದಿಗೆ ಬಾಗಿನ ನೀಡಿ ಹಬ್ಬಕ್ಕೆ ಶುಭಕೋರಿದರು.
ಚಂದಗಾಲು ಶಂಕರ್ ಮಾತನಾಡಿ, ಪೌರ ಕಾರ್ಮಿಕ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯ ಜವಾಬ್ದಾರಿಯೊಂದಿಗೆ ಪಟ್ಟಣ ಜನರ ಆರೋಗ್ಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಹೋದರಿಯರಿಗೆ ಬಾಗಿನ ನೀಡಿದ್ದು, ಇದನ್ನು ಪ್ರತಿವರ್ಷ ಮುಂದುವರಿಸುವುದಾಗಿ ತಿಳಿಸಿದರು.
ಅಧ್ಯಕ್ಷೆ ಲಯನ್ ಸರಸ್ವತಿ ಮಾತನಾಡಿ, ಇಂತಹ ಮೌಲ್ಯಯುತ ಸೇವೆ ತಮ್ಮಲ್ಲಿ ಖುಷಿ ನೀಡಿದ್ದು, ನಮಗಾಗಿ ದುಡಿಯುವ ಪೌರಕಾರ್ಮಿಕ ಮಹಿಳೆಯರ ಮನ-ಮೊಗದಲ್ಲಿ ಸಂತಸ ಮೂಡಿರುವುದು ಸಾರ್ಥಕ್ಯ ತರಿಸಿದೆ ಎಂದರು.
ಪುರಸಭೆಯ ಪರಿಸರ ಇಂಜಿನಿಯರ್ ಸಹನಾಗೌಡ ಮಾತನಾಡಿ, ಪೌರಕಾರ್ಮಿಕ ಮಹಿಳೆಯರನ್ನು ಸಹೋದರಿಯ ಭಾವನೆಯಿಂದ ತಮ್ಮ ಮನೆಯ ಸದಸ್ಯರಂತೆ ಪರಿಗಣಿಸಿ ಅಭಿಮಾನದಿಂದ ನೀಡಿದ ಗೌರವ ಮಹತ್ವಪೂರ್ಣ. ನಮಗಾಗಿಯೂ ಮಿಡಿಯುವ ಮನಸ್ಸುಗಳು ಸಮಾಜದಲ್ಲಿ ನಮ್ಮೊಡನೆ ಜತೆಗಿವೆ ಎಂಬ ಆಶಯ ಅವರಲ್ಲಿ ಭರವಸೆಯಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿವೆ ಎಂದು ಶ್ಲಾಘಿಸಿದರು.


ಕಿರಿಯ ಆರೋಗ್ಯ ನಿರೀಕ್ಷಕಿ ಚಂಪಾ, ವೇದಿಕೆ ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಲೋಕೇಶ್, ಅರಕೆರೆ ಹೋಬಳಿ ಅಧ್ಯಕ್ಷ ಬಳ್ಳೆಕೆರೆ ರಾಜಣ್ಣ, ಮಹಿಳಾ ಘಟಕದ ಮಂಜುಳಾ, ಶಕುಂತಲಾ, ಗೀತಾ, ಸುನೈನಾ, ಫಾತಿಮಾ, ಪದ್ಮಾ, ಕಲಾವತಿ, ಸುಧಾ, ಸಾಧನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net