

ಮೈಸೂರು: ಆಷಾಢ ಮಾಸದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿನ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಮಹಿಳಾ ಸಿಬ್ಬಂದಿಗೆ ಶ್ರೀದುರ್ಗಾ ಫೌಂಡೇಷನ್ ಟ್ರಸ್ಟ್‌ನಿಂದ ಬಾಗಿನ ಅರ್ಪಿಸಲಾಯಿತು.
ದೇವಸ್ಥಾನದ ಮುಂಭಾಗ ಮಹಿಳಾ ಸಿಬ್ಬಂದಿಗೆ ಸೀರೆ, ಬಳೆ, ಕುಂಕುಮ, ಅರಿಶಿಣ, ವೀಳ್ಯದೆಲೆ, ಅಡಕೆ, ಹೂವು, ತೆಂಗಿನಕಾಯಿ ನೀಡಲಾಯಿತು.
ಶ್ರೀಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಮಾತನಾಡಿ, ಆಷಾಢ ಮಾಸದ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ದೇಶ, ವಿದೇಶದಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಭಕ್ತರ ಅನೂಕೂಲಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆ, ಸರದಿ ಸಾಲು, ಅನ್ನದಾಸೋಹ, ಮೂಲಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಾರ್ವಜನಿಕರು ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಅನ್ನು ಮನೆಯಿಂದಲೇ ತರಲು ಮುಂದಾಗಬೇಕು. ಆ ಮೂಲಕ ಚಾಮುಂಡಿ ಬೆಟ್ಟದಲ್ಲಿ ಸದಾ ಸ್ವಚ್ಛತೆ ಕಾಪಾಡಬೇಕಾಗಿ ಮನವಿ ಮಾಡಿದ ಅವರು, ಪ್ರತಿವರ್ಷ ಶ್ರೀದುರ್ಗಾ ಫೌಂಡೇಷನ್‌ನಿಂದ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ, ಮೈಸೂರು ಪ್ರಾಂತ್ಯದಲ್ಲಿ ಆಷಾಢ ಮಾಸವೆಂದರೆ ದೇವಿ ಆರಾಧನೆಗೆ, ಪೂಜಾ ಕೈಂಕರ್ಯಕ್ಕೆ ಮಹಿಳೆಯರು ಹೆಚ್ಚು ಪ್ರಾಧಾನ್ಯ ನೀಡುತ್ತಾರೆ. ಚಾಮುಂಡಿಬೆಟ್ಟದಲ್ಲಿ ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತೆ, ಸ್ವಚ್ಛತಾ ಸಿಬ್ಬಂದಿಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಅವರಲ್ಲೂ ಹಬ್ಬ ಸಡಗರ ಮನೆ ಮಾಡಿದೆ ಎಂದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆರ್.ಎಚ್.ಪವಿತ್ರಾ, ದೇವಸ್ಥಾನದ ಅರ್ಚಕ ಸೋಮಣ್ಣ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡರಾದ ಮುತ್ತಣ್ಣ, ಲತಾ ಮೋಹನ್, ಶಾಂತಾ, ಜಿ.ರಾಘವೇಂದ್ರ, ಪವನ್, ಸಿದ್ದರಾಮು, ಸಂತೋಷ್ ಕಿರಾಳು, ಭೈರತಿ ಲಿಂಗರಾಜು, ರವಿಚಂದ್ರ, ಹರೀಶ್ ನಾಯ್ಡು ಇತರರು ಇದ್ದರು.