

ಕುಶಾಲನಗರ
ಶನಿವಾರ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾರಂಗಿ ಜಲಾಶಯಕ್ಕೆ ರೈತರೊಂದಿಗೆ ಬಾಗಿನ ಅರ್ಪಿಸಿ, ಅಣೆಕಟ್ಟೆ ಆವರಣದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಈ ಮೂಲಕ ಕಳೆದ ವರ್ಷ ಆರಂಭಿಸಿದ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದರು.
ಇದಕ್ಕೂ ಮೊದಲು ತೀರ್ಥೋದ್ಭವದ ನಂತರ ತಲಕಾವೇರಿಯ ಬ್ರಹ್ಮಕುಂಡಿಕೆಯಿAದ ತಂದ ಪವಿತ್ರ ತೀರ್ಥವನ್ನು ಕಾವೇರಿ ಮಾತೆಯ ಪ್ರತಿಮೆಗೆ ಅಭಿಷೇಕ ಮಾಡಲಾಯಿತು.
ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಡಾ. ಮಂತರ್ ಗೌಡ, ರೈತರ ಜೀವನಾಡಿ ಆಗಿರುವ ಕಾವೇರಿ ಮತ್ತು ಹಾರಂಗಿಗೆ ಗೌರವ ಸಲ್ಲಿಸುವುದು ನಮ್ಮ ಜವಾಬ್ದಾರಿ.
ಈ ಹಿನ್ನೆಲೆಯಲ್ಲಿ ಹಾರಂಗಿಗೆ ಬಾಗಿನ ಸಲ್ಲಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಾಗಿದೆ. ಈ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೊಸರಾಜು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಯಿಸಿ ಅದ್ದೂರಿಯಾಗಿ ಕಾರ್ಯಕ್ರಮ ರೂಪಿಸುವ ಯೋಜನೆ ಇತ್ತು. ಆದರೆ ಕಾರಣಾಂತರದಿAದ ಸಾಧ್ಯವಾಗಿಲ್ಲ. 7-14 ಕಿಮೀ ಹಾರಂಗಿ ನಾಲೆಗಳ ಆಧುನೀಕರಣಕ್ಕೆ 70 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದೆ. ಹಾರಂಗಿ ಸೇತುವೆ ಕಾಮಗಾರಿಯೂ ಆರಂಭವಾಗಲಿದೆ. ಇವುಗಳ ಗುದ್ದಲಿ ಪೂಜೆ ಸದ್ಯದಲ್ಲೇ ನೆರವೇರಲಿದೆ ಎಂದರು.
ಸೋಮವಾರಪೇಟೆ, ಕುಶಾಲನಗರ, ಅರಕಲಗೂಡು, ಪಿರಿಯಾಪಟ್ಟಣ, ಕೆ.ಆರ್. ನಗರ ಹಾಗೂ ಹುಣಸೂರು ತಾಲೂಕು ವ್ಯಾಪ್ತಿಯ ರೈತರ ಜೀವನಾಡಿ ಆಗಿರುವ ಹಾರಂಗಿ ಜಲಾಶಯಕ್ಕೆ ಗೌರವಾರ್ಪಣೆ ರೂಪವಾಗಿ ಮುಂದಿನ ವರ್ಷಗಳಲ್ಲೂ ಇದೇ ಸಂಪ್ರದಾಯ ಮುಂದುವರಿಸಿಕೊAಡು ಹೋಗುವುದಾಗಿ ಕಳೆದ ವರ್ಷ ಇಲ್ಲಿ ರೈತರ ಸಮ್ಮುಖದಲ್ಲಿ ಘೋಷಿದ್ದ ಮಂತರ್ ಗೌಡ ತಮ್ಮ ಮಾತಿನಂತೆ ಈ ವರ್ಷವೂ ನಡೆದುಕೊಂಡರು.
ಮೊದಲೆಲ್ಲ ಜಲಾಶಯ ಭರ್ತಿ ಆದ ಕೂಡಲೇ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸುವುದು ರೂಢಿಯಲ್ಲಿತ್ತು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಹಾರಂಗಿ ಅಣೆಕಟ್ಟೆಯ ಹಿರಿಯ ಅಧಿಕಾರಿಗಳು ಮಾತ್ರ ಈ ಸಂದರ್ಭದಲ್ಲಿ ಹಾಜರಿರುತ್ತಿದ್ದರು. ಆದರೆ ಕಳೆದ ವರ್ಷದಿಂದ ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಳಕೆದಾರರ ಸಂಘಗಳ ಮೂಲಕ ಆಗಮಿಸುವ ಪ್ರತಿನಿಧಿಗಳು, ರೈತರು ಕೂಡ ಬಾಗಿನ ಅರ್ಪಣೆ, ಕಾವೇರಿ ಮಾತೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.