

ಕುಶಾಲನಗರ:
ಕಾವೇರಿ ತುಲಾಸಂಕ್ರಮಣದ ಅಂಗವಾಗಿ ತಲಕಾವೇರಿಯ ಕುಂಡಿಕೆಯಿಂದ ತಂದ ಗಂಗಾ ಜಲದಿಂದ ಹಾರಂಗಿ ಜಲಾಶಯದ ಮುಂಬದಿಯಲ್ಲಿರುವ ಕಾವೇರಿ ಪ್ರತಿಮೆಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಡಾ.ಮಂತರಗೌಡ ಹಾಗೂ ಅರಕಲಗೂಡು ಶಾಸಕ ಎ.ಮಂಜು ಶುಕ್ರವಾರ ಪಾಲ್ಗೊಂಡರು.
ಹಾರಂಗಿ ಅಚ್ಚುಕಟ್ಟು ಪ್ರದೇಶದ ಅಪಾರ ಸಂಖ್ಯೆಯ ರೈತರು ಹಾಗೂ ಬೆಂಬಲಿಗರೊಂದಿಗೆ ಧಾವಿಸಿದ ಶಾಸಕದ್ವಯರು ನಾಡಿನಾದ್ಯಂತ ಈ ಬಾರಿ ಅತ್ಯುತ್ತಮ ಮಳೆಯಾಗಿರುವುದರಿಂದ ರೈತಾಪಿಗಳು ಬೆಳೆದಿರುವ ಬೆಳೆಯ ಉತ್ತಮ ಫಸಲು ಬಂದು ನಾಡು ಸಮೃದ್ಧವಾಗಲೆಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದರು. ನಂತರ ಜಲಾಶಯಕ್ಕೆ ತೆರಳಿ ಬಾಗೀನ ಸಮರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಮಂತರಗೌಡ, ಈ ಬಾರಿ ಕಾವೇರಿ ತಾಯಿಗೆ ತಲಕಾವೇರಿಯ ಪವಿತ್ರ ತೀರ್ಥವನ್ನು ತಂದು ಅಭಿಷೇಕ ಮಾಡಿ ಪೂಜಿಸಿ ಪ್ರಾರ್ಥಿಸಲಾಗಿದೆ.
ರೈತಾಪಿ ಸಂಕುಲಕ್ಕೆ ಕೃಷಿಗೆ ನೀರು ಹರಿಸುವ ಜಲಾಶಯಕ್ಕೆ ರೈತರನ್ನೆಲ್ಲಾ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಅವರೊಟ್ಟಿಗೆ ಊಟ ಮಾಡುವ ಉದ್ದೇಶದಿಂದ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ತು ಸದಸ್ಯ ಸುಜಾಕುಶಾಲಪ್ಪ, ಮಾಜಿ ಎಂಎಲ್ ಸಿ ವೀಣಾ ಅಚ್ಚಯ್ಯ, ಕುಶಾಲನಗರ ತಾಲ್ಲೂಕಿ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕಾಂಗ್ರೆಸ್ ಪ್ರಮುಖರಾದ ಮಂಜುನಾಥ ಗುಂಡೂರಾವ್, ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರನಾಯಕ್,ಟಿ.ಪಿ.ಹಮೀದ್ ಮೊದಲಾದವರಿದ್ದರು.
ಇದೇ ಸಂದರ್ಭ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳಾದ ಕಾವೇರಿ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಜಿಟ್ಡೇನಹಳ್ಳಿ ಅಶೋಕ್, ರಮೇಶ್ ಹುಣಸೂರು, ಲೋಕೇಶ್ ಬಸವಾಪಟ್ಟಣ, ಯತೀಶ್ ಮಾಯಗೌಡನಹಳ್ಖಿ, ಕಿರಣಕುಮಾರ್ ಹುಣಸೂರು, ಸುಬ್ಬಯ್ಯ ಐಗೂರು, ತಿಮ್ಮೇಗೌಡ ಕೆ.ಆರ್.ನಗರ, ಬಿಎಸ್ಮಹರೀಶ್ ದಿಂಡಗಾಡು, ಗುರುಲಿಂಗಪ್ಪ, ಉಮಾ ಪ್ರಭಾಕರ್ ಮೊದಲಾದವರಿಗೆ ಕಾವೇರಿ ತಾಯಿಯ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.