ಮಕ್ಕಳಿಗೆ ವೈಚಾರಿಕ ಪ್ರಜ್ಞೆ ಬೆಳೆಸಿಕೊಡುವಲ್ಲಿ ಮಠದ ಪಾತ್ರ ಮಹತ್ವದ್ದು

12TMK_Khubha
Published on

ತುಮಕೂರು : ದೇಶದಲ್ಲಿ ಯಾವ ಹುದ್ದೆಯನ್ನಾದರೂ ಅಲಂಕರಿಸುವ ವ್ಯಕ್ತಿ ಮೊದಲಿಗೆ ನೆನಪು ಮಾಡಿಕೊಳ್ಳುವುದು ಸಿದ್ಧಗಂಗಾ ಮಠವನ್ನು. ಶ್ರೀಮಠಕ್ಕೆ ಯಾರಿಗೂ ಆಹ್ವಾನ ನೀಡುವ ಅಗತ್ಯವಿಲ್ಲ, ತಾವಾಗಿಯೇ ಆಗಮಿಸಿ ಆಶೀರ್ವಾದ ಪಡೆಯುತ್ತಾರೆ ಎಂದು ಕೇಂದ್ರ ಸಚಿವ ಭಗವಂತಖೂಬ ಹೇಳಿದರು.

ಸಿದ್ಧಗಂಗಾ ಮಠಕ್ಕೆ ಮಂಗಳವಾರ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ಮಠದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ವೈಚಾರಿಕ ಪ್ರಜ್ಞೆ ಬೆಳೆಸಿಕೊಡುವಲ್ಲಿ ಮಠದ ಪಾತ್ರ ಮಹತ್ವದ್ದು ಎಂದರು.

ಜೀವನದಲ್ಲಿ ಸಮಾಜಮುಖಿಯಾಗಿ, ಸರಳವಾಗಿ ಬದುಕಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತಿದೆ, ಸಿದ್ಧಗಂಗಾ ಮಠದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವುದು ನಮ್ಮ ಪುಣ್ಯ ಎಂದೇ ಭಾವಿಸುತ್ತೇನೆ. ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿಯಾಗಿ ನಾನು ಕಲಿತಿದ್ದ ನೆನಪು ಮರುಕಳಿಸುವಂತಾಗಿದೆ ಎಂದು ಸ್ಮರಿಸಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದದಿಂದ ನಾನು ಜನಸೇವಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ, ನಮ್ಮ ಇಡೀ ಬದುಕಿನಲ್ಲಿ ಸಿದ್ಧಗಂಗಾ ಸಂಸ್ಥೆಯ ಛಾಪು ಕಾಣಿಸುತ್ತದೆ, ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಗಳು ಶ್ರೀಮಠದ ಒಡನಾಟದಿಂದಲೇ ಕಲಿತಿರುವುದು, ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ನಮ್ಮ ಮೇಲಿರುವುದು ಪುಣ್ಯ ಎಂದರು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಸ್‌ಐಟಿ ಸಿಇಒ ಡಾ.ಶಿವಕುಮಾರಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net