ಬಗರ್‌ಹುಕುಂ ಅರ್ಜಿ ತಿರಸ್ಕಾರ ಸಲ್ಲ

3 kmp 02
ಕಂಪ್ಲಿಯಲ್ಲಿ ಆಯೋಜಿಸಿದ್ದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ಮಾತನಾಡಿದರು. ಪ್ರಮುಖರಾದ ವಸಂತರಾಜ ಕಹಳೆ, ಕೆ.ಲಕ್ಷ್ಮಣ, ಸೀಕ್ಲಿ ಬಸವರಾಜ, ಶಾಂತಪ್ಪ ಪೂಜಾರಿ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಅತಿಥಿಗೃಹ ಆವರಣದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳ ಸಂಘಟನಾ ಸಭೆ ಸೋಮವಾರ ನಡೆಯಿತು.

ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ಮಾತನಾಡಿ, ಸರ್ಕಾರದ ದೃಷ್ಟಿಯಲ್ಲಿ ಯೋಗ್ಯವಲ್ಲದ ಭೂಮಿಯಲ್ಲಿ ಬದುಕು ಕಟ್ಟಿಕೊಂಡ ರೈತರ ಬಗರ್‌ಹುಕುಂ ಅರ್ಜಿಗಳನ್ನು ತಿರಸ್ಕೃತಗೊಳಿಸಿದ್ದು ಸರಿಯಲ್ಲ. ಕಾನೂನು ತಿದ್ದುಪಡಿ ಮೂಲಕ ಕೃಷಿ ಯೋಗ್ಯವಲ್ಲದ ಭೂಮಿಯನ್ನು ರೈತರಿಗೆ ಪಟ್ಟಾ ನೀಡಬೇಕು. ತಾಲೂಕಿನಲ್ಲಿ 2,185ಬಗರ್‌ಹುಕುಂ ಅರ್ಜಿ ಸಲ್ಲಿಸಿದ್ದು ಕೇವಲ 253ಅರ್ಜಿಗಳನ್ನು ಪರಿಶೀಲನೆಗೆ ಪರಿಗಣಿಸಿ ಉಳಿದ 1,932ಅರ್ಜಿಗಳನ್ನು ತಿರಸ್ಕರಿಸಿದ್ದು ಸರಿಯಲ್ಲ.

ಬಗರ್‌ಹುಕುಂ ಸಾಗುವಳಿದಾರರು ಹಲವು ದಶಕಗಳಿಂದ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಇವರಿಗೆ ಅನ್ಯಾಯವಾಗಬಾರದು. ಕಾನೂನು ತಿದ್ದುಪಡಿ ಮಾಡಿ ಪಟ್ಟಾ ನೀಡುವಂತೆ ಆಗ್ರಹಿಸಿ ಮಾ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ. ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರು, ಅರ್ಜಿ ತಿರಸ್ಕೃತಗೊಂಡ ಫಲಾನುಭವಿಗಳು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ರಾಜ್ಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ನಂ.10ಮುದ್ದಾಪುರದ 29ಎಕರೆಯಲ್ಲಿ 50ರೈತರು ಉಳುಮೆ ಮಾಡುತ್ತಿದ್ದ ಜಮೀನನ್ನು ವಶಪಡಿಸಿಕೊಂಡ ಸರ್ಕಾರ ಆಡಳಿತ ಸೌಧ ನಿರ್ಮಿಸಿದೆ. ಭೂಮಿ ಕಳೆದುಕೊಂಡ ರೈತರಿಗೆ ಭೂಮಿ, ನಿವೇಶನ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಗ್ರಾಮಗಳಲ್ಲಿಯೂ ಅಭಿವೃದ್ಧಿ ನೆಪದಲ್ಲಿ ಬಗರ್‌ಹುಕುಂ ಭೂಮಿ ಮೀಸಲಿಡುವ ಶಾಸಕರ ಕ್ರಮ ಸರಿಯಲ್ಲ. ಬಗರ್‌ಹುಕುಂ ರೈತರಿಗೆ ಭೂಮಿ ನೀಡುವಲ್ಲಿ ಶಾಸಕರು ಮುಂದಾಗದಿದ್ದಲ್ಲಿ ಬಗರ್‌ಹುಕುಂ ಹೋರಾಟದ ಕಾವು ಶಾಸಕರಿಗೆ ತಗುಲಲಿದೆ ಎಂದು ಎಚ್ಚರಿಕೆ ನೀಡಿದರು.

ನಾನಾ ಸಂಘಟನೆ ಪದಾಧಿಕಾರಿಗಳಾದ ಬಸಪ್ಪ ಮೆಟ್ರಿ, ಬಾರಿಕೇರ ಗಂಗಾಧರ, ಆನೆ ಯಲ್ಲಪ್ಪ, ಅರುಣಾ, ಎಚ್.ಮಹೇಶ, ಸಿ.ಬಸವರಾಜ, ಜೆ.ಉಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net