ಬಗರ್‌ಹುಕುಂ ಬಾಕಿ ಅರ್ಜಿ ವಿಲೇವಾರಿಯಾಗಲಿ

Published on

ಮೈಸೂರು: ಜೀವನೋಪಾಯಕ್ಕಾಗಿ ಬೇಸಾಯ ಮಾಡುತ್ತಿರುವ ಅರ್ಹ ರೈತರಿಗೆ ಭೂಹಕ್ಕು ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬಳ್ಳಾಪುರ ಮೂಲದ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಚಾಲಕರಾದ ಕೆ. ಚಿತ್ರಾವತಿ ಆಗ್ರಹಿಸಿದರು.
ರಾಜ್ಯದಲ್ಲಿ ಲಕ್ಷಾಂತರ ಬಗರ್‌ಹುಕುಂ ಸಾಗುವಳಿ ಅರ್ಜಿ ವಿಲೇವಾರಿ ಬಾಕಿ ಇದ್ದು, ಈಗಾಗಲೇ 54 ಸಾವಿರ ಹೆಕ್ಟೇರ್ ಭೂಮಿ ಲಭ್ಯವಿರುವ ಮಾಹಿತಿಯೂ ಇದೆ. ಆದರೂ ಸಕ್ರಮೀಕರಣಕ್ಕೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
15 ವರ್ಷಗಳಿಂದ ನಮ್ಮ ವೇದಿಕೆ ರಾಜ್ಯಾದ್ಯಂತ ಬಗರ್‌ಹುಕುಂ ಸಾಗುವಳಿದಾರರ ಜೀವನಮಟ್ಟ ಸುಧಾರಣೆಯಲ್ಲಿ ತೊಡಗಿಸಿಕೊಂಡಿದೆ. ಇದೇ ರೀತಿ ಹಲವರಿಗೆ ದೊರಕಿಸಿಕೊಟ್ಟಿದೆ. ಇನ್ನೂ ಸಾವಿರಾರು ಜನರು ಭೂಮಿ ಹಕ್ಕಿಗಾಗಿ ಕಾಯುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಿಸಿದ ಸಚಿವರು ಇತ್ತ ಗಮನ ಹರಿಸಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಗಡಿ ಗೊಂದಲ ಹೋಗಲಾಡಿಸಿ, ತ್ವರಿತವಾಗಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ವೇದಿಕೆಯ ಮಹೇಶ್ಚಂದ್ರ ಗುರು, ಪ್ರಸನ್ನಮೂರ್ತಿ, ಬಾಲಗಂಗಾಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net