ಬಗರ್‌ಹುಕುಂ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

15 DVD 01
ಶಿವಪ್ಪ
Published on

ದೇವದುರ್ಗ:ತಾಲೂಕು ಸೇರಿ ರಾಜ್ಯಾದ್ಯಂತ ಭೂಮಿ ಉಳಿಮೆ ಮಾಡುತ್ತಿರುವ ಬಗರ್‌ಹುಕಂ ಸಾಗುವಳಿದಾರರನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸೆ.17ರಂದು ರಾಯಚೂರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಪ್ಪ ಪಲಕನಮರಡಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ತಾಲೂಕಿನಲ್ಲಿ ಬಡವರು ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಸಿಗದ ಕಾರಣ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆಡೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದರಿಂದ ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

ಗ್ರಾಮೀಣ ಭಾಗದ ಜನ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿದ್ದು, ಕನಿಷ್ಠ ಸೌಲಭ್ಯಗಳಿಲ್ಲ. ಜನರಿಗೆ ಗ್ರಾಪಂ ಆಡಳಿತ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಕುಡಿವ ನೀರು, ರಸ್ತೆ, ಚರಂಡಿ ಹಾಳಾಗಿವೆ. ಸೊಳೆಗಳ ಹಾವಳಿಯಿಂದ ಜನರು ಸಾಂಕ್ರಾಮಿಕ ರೋಗದಿಂದ ನರಳುತ್ತಿದ್ದಾರೆ. ಸಮಸ್ಯೆ ಆಲಿಸಬೇಕಾದ ತಾಪಂ ಕಾರ್ಯನಿರ್ವಹಕ ಅಧಿಕಾರಿ ಬಸವರಾಜ ಹಟ್ಟಿ ಕೇವಲ ನರೇಗಾ ಕಾಮಗಾರಿಗೆ ಸೀಮಿತರಾಗಿದ್ದಾರೆ. 35ಜನ ಪಿಡಿಒಗಳು, 17ಟೆಕ್ನಿಕಲ್ ಅಸಿಸ್ಟೆಂಟ್ ಅಮಾನತುಗೊಂಡರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ನರೇಗಾ ಕಾಮಗಾರಿ ಬಿಟ್ಟು ಬೇರೆ ಕೆಲಸವೇ ನಡೆಯುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಫೇಲ್ ಆಗುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದ್ದು ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ಅದರಲ್ಲಿ 17ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಶಾಲೆಗೆ ಹೋಗುವುದಿಲ್ಲ. ರಾಜಕೀಯ ನಾಯಕರ ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಟೀಕಿಸಿದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ಹಾಗೂ ಮನೆ ರಹಿತ ಬಡವರಿಗೆ ಸೂಕ್ತ ನಿವೇಶನ ಸಹಿತ ಮನೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಮನವಿ ಸಲ್ಲಿಸಲಾಗುವುದು ಎಂದರು. ಮುಖಂಡರಾದ ರಾಘವೇಂದ್ರ ಅಂಜಳ್ಳಿ, ಬಸವರಾಜ ಹೋರಿ, ಪ್ರಭು ಕೊತ್ತದೊಡ್ಡಿ, ಚನ್ನಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net